ತಾಲಿಬಾನ್‌ ಆಡಳಿತಕ್ಕೆ 50 ದಿನ: ಅಂತಾರಾಷ್ಟ್ರೀಯ ಮಾನ್ಯತೆಗೆ ಮುಂದುವರಿದ ಕಸರತ್ತು!

ಕಾಬೂಲ್‌: ಮುಸ್ಲಿಂ ಮೂಲಭೂತವಾದಿ ಸಂಘಟನೆ 'ತಾಲಿಬಾನ್‌' ಅಫಘಾನಿಸ್ತಾನದ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಂಡು 50 ದಿನಗಳು ಕಳೆದಿದ್ದು, ಅಂತಾರಾಷ್ಟ್ರೀಯ ಮಾನ್ಯತೆಗಾಗಿ ಮುಸ್ಲಿಂ ರಾಷ್ಟ್ರಗಳ ಮುಂದಾಳತ್ವದಲ್ಲಿ ತೆರೆಮರೆಯ ಕಸರತ್ತು ಮುಂದುವರಿಸಿದೆ. ಏತನ್ಮಧ್ಯೆ, ಆಫ್ಘನ್‌ನಲ್ಲಿ ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಹಕ್ಕುಗಳನ್ನು ಮೂಲೆಗುಂಪು ಮಾಡಲಾಗಿದೆ. ಅಮಾನವೀಯ ಧೋರಣೆ ಹೊಂದಿರುವ ತಾಲಿಬಾನ್‌ ಆಡಳಿತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ನೀಡದಿರುವಂತೆ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ಜಾಗತಿಕ ವೇದಿಕೆಯಲ್ಲಿ ಅಭಿಪ್ರಾಯ ಮಂಡಿಸುತ್ತಿವೆ. ಆದರೆ, ಮುಸ್ಲಿಂ ರಾಷ್ಟ್ರಗಳ ಸಂಘಟನೆಗಳ ಮುಂದಾಳತ್ವದಲ್ಲಿ ಅಮೆರಿಕ ಮತ್ತು ತಾಲಿಬಾನ್‌ ನಡುವೆ ಮತ್ತೆ 'ದೋಹಾ ಶಾಂತಿ ಮಾತುಕತೆ' ನಡೆದಿದೆ. ತಾಲಿಬಾನ್‌ ಹಾಗೂ ಅಮೆರಿಕ, ಕತಾರ್‌, ಬ್ರಿಟನ್‌ ಹಾಗೂ ಪಾಕಿಸ್ತಾನದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯ ಫಲಶ್ರುತಿ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಈ ನಡುವೆ ಚೀನಾ ಹಾಗೂ ರಷ್ಯಾ ತಾಲಿಬಾನ್‌ಗೆ ನೇರ ಬೆಂಬಲ ವ್ಯಕ್ತಪಡಿಸಿವೆ. ಹಕ್ಕುಗಳ ದಮನ: ಪಾಕಿಸ್ತಾನದ ಐಎಸ್‌ಐ ಬೆಂಬಲದಿಂದ ಕಳೆದ ಆಗಸ್ಟ್‌ 15ರಿಂದ ಕಾಬೂಲ್‌ನಿಂದ ಆರಂಭಿಸಿ ಇಡೀ ರಾಷ್ಟ್ರವನ್ನು ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿಗಳು ಮೊದಲು ಮಾಡಿದ ಕೆಲಸ ಶರಿಯಾ ಕಾನೂನು ಜಾರಿಗೆ ತಂದಿರುವುದು. ಹೀಗಾಗಿ ಎರಡು ದಶಕಗಳ ಕಾಲ ಅಮೆರಿಕ ಬೆಂಬಲದಿಂದ ಸುಧಾರಣೆ ಹಾದಿಯತ್ತ ಹೊರಳುತ್ತಿದ್ದ ಆಘ್ಘನ್‌ ಮತ್ತೆ ಮಧ್ಯಕಾಲೀನ ಯುಗಕ್ಕೆ ಮರಳಿದೆ. ಮಹಿಳೆಯರ ಹಕ್ಕುಗಳನ್ನು ತೆಗೆದುಹಾಕಿ ಅವರನ್ನು ನಾಲ್ಕು ಗೋಡೆಗಳ ಒಳಗೆ ತಳ್ಳಲಾಗಿದೆ. ತಾಲಿಬಾನ್‌ಗಳ ಆಕ್ರಮಣಕಾರಿ ಧೋರಣೆ ಜಾಗತಿಕವಾಗಿ ಖಂಡನೆಗೆ ಒಳಗಾಗುತ್ತಿವೆ. ಯಾವ ರಾಷ್ಟ್ರಗಳೂ ಅವರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಒದಗಿಸುವ ಕೆಲಸದ ನೇತೃತ್ವ ವಹಿಸಿಕೊಳ್ಳುತ್ತಿಲ್ಲ. ಹೀಗಾಗಿ ದೋಹಾ ಶಾಂತಿ ಮಾತುಕತೆ ಬಗ್ಗೆಯೂ ಅಪಸ್ವರಗಳು ಕೇಳಿಬಂದಿದ್ದು, ದಮನಕಾರಿ ನೀತಿ ಹೊಂದಿರುವ ತಾಲಿಬಾನ್‌ಗೆ ಮಾನ್ಯತೆ ಕೊಡಿಸುವುದೇ ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ತಾಲಿಬಾನ್‌ ಸಮರ್ಥಕರಾಗಿದ್ದು ಅಮೆರಿಕದ ಹಿಡಿತದಿಂದ ವಾಪಸ್‌ ಅಧಿಕಾರ ಪಡೆದುಕೊಂಡಿದ್ದು ಸರಿ ಎಂದು ಹೇಳುವ ಜತೆಗೆ ಮಾನ್ಯತೆ ಕೊಡಿಸಲು ಹೆಣಗಾಡುತ್ತಿದ್ದಾರೆ. ಅರಾಜಕತೆ: ತಾಲಿಬಾನ್‌ ಬಲಪ್ರಯೋಗದ ಮೂಲಕ ಕಾಬೂಲ್‌ ವಶಕ್ಕೆ ಪಡೆದುಕೊಂಡಿರುವ ಹೊರತಾಗಿಯೂ ಅಲ್ಲಿ ವ್ಯವಸ್ಥಿತ ಸರಕಾರ ರಚನೆಯಾಗಿಲ್ಲ. ಹೀಗಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಜನರು ಆಹಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಸರಬರಾಜು ಕೂಡ ನಿಲುಗಡೆಯಾಗಿದ್ದು ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ.


from India & World News in Kannada | VK Polls https://ift.tt/3l3tjCD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...