ಟೋಕಿಯೋ (ಜಪಾನ್): ಭಾರತದ ಸ್ಟಾರ್ ಕ್ರೀಡಾಪಟು ನೀರಜ್ ಚೋಪ್ರಾ ಅವರು ಇಲ್ಲಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಫೈನಲ್ ಸುತ್ತಿಗೆ ಆಟೋಮ್ಯಾಟಿಕ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಜಾವೆಲಿನ್ ಥ್ರೋ ಪುರುಷರ ವಿಭಾಗದ ಫೈನಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 83.50 ಮೀಟರ್ ಜಾವೆಲಿನ್ ಎಸೆಯಬೇಕು ಅಥವಾ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಅಗ್ರ 12 ಜಾವೆಲಿನ್ ಥ್ರೋ ಪಟುಗಳನ್ನು ಆರಿಸಲಾಗುತ್ತದೆ. ಗುಂಪು 'ಎ' ಮತ್ತು 'ಬಿ' ಯಲ್ಲಿನ ಒಟ್ಟು 12 ಮಂದಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ. ಈಗಾಗಲೇ ಗುಂಪು 'ಎ' ಹಂತದ ಅರ್ಹತಾ ಸುತ್ತು ಮುಗಿದಿದ್ದು, ಇಂದು ತಡವಾಗಿ 'ಬಿ' ಗುಂಪಿನ ಅರ್ಹತಾ ಸುತ್ತು ನಡೆಯಲಿದೆ. ಅಂದಹಾಗೆ, ನೀರಜ್ ಚೋಪ್ರಾ ಗುಂಪು 'ಎ' ಹಂತದ ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನದಲ್ಲಿದ್ದರು. ಆದರೆ, ಮೊದಲ ಪ್ರಯತ್ನದಲ್ಲಿಯೇ 86.65 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಫೈನಲ್ ಸುತ್ತಿಗೆ ಆಟೋಮ್ಯಾಟಿಕ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಭಾರತದ ನೀರಜ್ ಚೋಪ್ರಾ ಜೊತೆಗೆ ಫಿನ್‌ಲೆಂಡ್‌ನ ಲಸ್ಸಿ ಎಟೆಲಾಟಲೊ ಅವರು ಕೂಡ ಮೊದಲ ಪ್ರಯತ್ನದಲ್ಲಿಯೇ ಅಂತಿಮ ಸುತ್ತಿಗೆ ಆಟೋಮ್ಯಾಟಿಕ್ ಅರ್ಹತೆ ಪಡೆದರು. ಜಾವೆಲಿನ್ ಥ್ರೋ ವಿಭಾಗದ ಫೈನಲ್ ಆಗಸ್ಟ್ 7 ರಂದು ಒಲಿಂಪಿಕ್ ಸ್ಟೇಡಿಯಂನಲ್ಲಿ ಜರುಗಲಿದೆ. ಅಂದಹಾಗೆ ದೇಶಿ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ನೀರಜ್ ಚೋಪ್ರಾ, ಇದೀಗ ಟೋಕಿಯೋದಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ಭಾರತದ ಮಹಿಳಾ ಜಾವೆಲಿನ್ ಥ್ರೋ ಪಟು ಅನ್ನು ರಾಣಿ ಅವರು ಫೈನಲ್ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. 'ಎ' ಗುಂಪಿನ ಅರ್ಹತಾ ಸುತ್ತಿನಲ್ಲಿ ನೀರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದ ಅನ್ನು ರಾಣಿ, ಅಂತಿಮ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿ ಎಲ್ಲರಿಗೂ ನಿರಾಸೆ ಮೂಡಿಸಿದ್ದರು. ಶಿವಪಾಲ್ ಸಿಂಗ್‌ಗೆ ನಿರಾಸೆ: 'ಬಿ' ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ ಭಾರತದ ಮತ್ತೊರ್ವ ಜಾವೆಲಿನ್ ಥ್ರೋ ಪಟು ಶಿವಪಾಲ್ ಸಿಂಗ್ ಅವರು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅವರು ಮೂರೂ ಪ್ರಯತ್ನಗಳಲ್ಲಿ ಕ್ರಮವಾಗಿ 76.40, 74.80 ಹಾಗೂ 74.81 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಅಂತಿಮ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lqZ4WH