ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪತಿ, ಪತ್ನಿಯ ನಡುವೆ ಜಗಳವಾಗಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಪತಿ ಕಂಬಕ್ಕೆ ಕಟ್ಟಿ ಹಾಕಿ, ಬಳಿಕ ಪೊಲೀಸರಿಗೆ ದೂರು ನೀಡಿದ ಘಟನೆ ಇಂಡಿ ತಾಲೂಕಿನ ಲಿಂಗದಳ್ಳಿ ತಾಂಡೆ ನಂ.1ರಲ್ಲಿ ನಡೆದಿದೆ. ತಾಂಡೆಯ ಅನಿತಾ ಸಂತೋಷ ಜಾಧವ (19) ಎಂಬುವರೇ ದಿಗ್ಬಂಧನಕ್ಕೊಳಗಾದ ಮಹಿಳೆ. ಆದರೆ ಅನಿತಾಳ ವರಸೆಯೇ ಬೇರೆ. ವರದಕ್ಷಿಣೆ ದುರಾಸೆಗಾಗಿ ನನ್ನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ವಾಸ್ತವದಲ್ಲಿ ಹಾಗಾಗಿಲ್ಲ. ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳವಾಗಿದೆ. ಇದರಿಂದ ಸಿಟ್ಟಾದ ಅನೀತಾ ನೇಣು ಹಾಕಿಕೊಳ್ಳಲು ಹಾಗೂ ಮಾಳಿಗೆಯಿಂದ ನೆಗೆದು ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಹಾಕಿದ್ದಾಳೆ. ಇದಕ್ಕೆ ಹೆದರಿದ ಗಂಡನ ಮನೆಯವರು ಆಕೆಯ ಆತ್ಮಹತ್ಯೆ ತಪ್ಪಿಸಬೇಕೆಂಬ ಉದ್ದೇಶದಿಂದ ಕಂಬಕ್ಕೆ ಕಟ್ಟಿ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಸ್ಥಳಕ್ಕೆ ಧಾವಿಸಿ, ಆಕೆಯನ್ನು ರಕ್ಷಿಸಿದ್ದೇವೆ. ಈ ಕುರಿತು ದೂರು, ಪ್ರತಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹೊರ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls https://ift.tt/3xmHRAd