ಸಂತೋಷ್ ಕಾಚಿನಕಟ್ಟೆ ಶಿವಮೊಗ್ಗ: ಲಿಂಗತ್ವ ಅಲ್ಪಸಂಖ್ಯಾತರ ಅಭ್ಯುದಯ, ಅವರ ಹಕ್ಕುಗಳನ್ನು ಕಾಪಾಡುವ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸರಕಾರವು 2017ರಲ್ಲಿ 'ಲಿಂಗತ್ವ ಅಲ್ಪಸಂಖ್ಯಾತರ ನೀತಿ'ಯನ್ನು ಜಾರಿಗೊಳಿಸಿದೆ. ಆದರೆ ಸಮಾಜ ಮತ್ತು ಕುಟುಂಬ ವರ್ಗದವರು ಅವರನ್ನು ನೋಡುವ ದೃಷ್ಟಿಕೋನ ಮಾತ್ರ ಇನ್ನೂ ಬದಲಾಗಿಲ್ಲ. ಸರಕಾರ ಅವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದರೂ ಅವುಗಳನ್ನು ಪಡೆದುಕೊಳ್ಳಲು ಲಿಂಗತ್ವ ಅಲ್ಪಸಂಖ್ಯಾತರು ಮುಂದೆ ಬರುತ್ತಿಲ್ಲ. ಅವರಿಗಾಗಿ ಮಾಸಾಶನ, ಪುನರ್ವಸತಿ ಮತ್ತು ಸ್ವ ಉದ್ಯೋಗಕ್ಕಾಗಿ 50 ಸಾವಿರ ರೂ. ಬಡ್ಡಿ ರಹಿತ ಸಾಲ(ಇದರಲ್ಲಿ25 ಸಾವಿರ ರೂ. ಸಹಾಯಧನ), ಉದ್ಯೋಗಿನಿ ಕಿರುಸಾಲ, ಸಮೃದ್ಧಿ ಪರಿಶಿಷ್ಟ ಉಪಯೋಜನೆಗಳು, ಧನಶ್ರೀ, ಚೇತನ ಯೋಜನೆಗಳಿವೆ. ಆದರೆ, ಈ ಎಲ್ಲ ಯೋಜನೆಗಳಲ್ಲಿ ಸವಲತ್ತು ಪಡೆದುಕೊಂಡವರ ಸಂಖ್ಯೆ ತುಂಬ ಕಡಿಮೆ ಇದೆ. ಶಿವಮೊಗ್ಗದಲ್ಲಿ 639 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇದರಲ್ಲಿ ಇದೂವರೆಗೆ ಮಾಸಾಶನ ಪಡೆದುಕೊಂಡವರ ಸಂಖ್ಯೆ ಕೇವಲ 50. ಕಳೆದ 7 ವರ್ಷದಲ್ಲಿ ಪುನರ್ವಸತಿ ಯೋಜನೆಯಡಿ 110 ಮಂದಿ ಮಾತ್ರ ಸವಲತ್ತು ಪಡೆದುಕೊಂಡಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಪರಿಸ್ಥಿತಿ ಹೀಗೆಯೇ ಇದೆ. ಭದ್ರತೆ ನೀಡದ ಯೋಜನೆಗಳು:ಸರಕಾರ ನೀಡುತ್ತಿರುವ ಸವಲತ್ತು ಕವಡೆ ಕಾಸಿಗೂ ಕಿಮ್ಮತ್ತಿಲ್ಲದಂತಾಗಿದೆ. ಮಾಸಾಶನ 600 ರೂ., ಪುನರ್ವಸತಿ ಯೋಜನೆಯಲ್ಲಿ 50 ಸಾವಿರ ರೂ. ಸೇರಿದಂತೆ ವಿವಿಧ ಯೋಜನೆಗಳ ಮೊತ್ತ ತುಂಬ ಕಡಿಮೆ ಇದೆ. ಮಾಸಾಶನವನ್ನು ಕನಿಷ್ಠ 5 ಸಾವಿರ ರೂ. ನೀಡಬೇಕೆನ್ನುವುದು ಅವರ ಬೇಡಿಕೆ. ಇನ್ನು ಭಿಕ್ಷಾಟನೆ ತೊರೆದು ಸ್ವ ಉದ್ಯೋಗ ಕೈಗೊಳ್ಳುವ ಆಸೆಯಿಂದ ವ್ಯಾಪಾರ ವಹಿವಾಟು ನಡೆಸಿದವರಿಗೂ ನಿರಾಸೆಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಅವರ ಬಳಿ ಸಾಮಾನ್ಯ ಜನರು ವ್ಯಾಪಾರಕ್ಕೆ ಬರದೆ ಹಾಕಿದ ಬಂಡವಾಳವನ್ನೂ ನಷ್ಟ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಮಂದಿಕರ್ನಾಟಕದಲ್ಲಿ 1 ಲಕ್ಷಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಅದರೆ, ಇದರಲ್ಲಿ ಮೈತ್ರಿ ಯೋಜನೆಯಡಿ ಮಾಸಾಶನ ಪಡೆಯುತ್ತಿರುವವರ ಸಂಖ್ಯೆ 3 ಸಾವಿರ ಸಹ ಇಲ್ಲ. ಉಳಿದ ಯೋಜನೆಗಳನ್ನು ಪಡೆದುಕೊಳ್ಳುವವರ ಸಂಖ್ಯೆ ಸಹ ತುಂಬ ಕಡಿಮೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದವರ ಸಂಖ್ಯೆ 5 ಸಾವಿರ ಸಹ ಇಲ್ಲ. ಬಹಳಷ್ಟು ಟ್ರಾನ್ಸ್‌ಜೆಂಡರ್‌ಗಳು ತಮ್ಮ ನೈಜಸ್ಥಿತಿ ಬಗ್ಗೆ ಮನೆಯಲ್ಲಿ ಹೇಳಿಕೊಂಡಿರುವುದಿಲ್ಲ. ಸವಲತ್ತಿಗಾಗಿ ಅರ್ಜಿ ಸಲ್ಲಿಸಿದಲ್ಲಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಮನೆಗೆ ಬಂದು ವಿಷಯ ಬಹಿರಂಗಗೊಂಡು ರಾದ್ಧಾಂತವಾಗುತ್ತದೆ ಎಂಬ ಹೆದರಿಕೆಯಿಂದ ಕೆಲವರು ಅರ್ಜಿ ಹಾಕುತ್ತಿಲ್ಲ.
from India & World News in Kannada | VK Polls https://ift.tt/3CeNqnJ