ಲಖನೌ: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಭಾರೀ ಅನಾಹುತ ಘಟಿಸಿದೆ. ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಭೇಟಿ ವಿರೋಧಿಸಿ ಭಾನುವಾರ ಸಂಜೆ ಟಿಕೋನಿಯಾ- ಬನಿರ್‌ಪುರ ರಸ್ತೆ ಬಳಿ ರೈತರು ನಡೆಸಿದ ಪ್ರತಿಭಟನೆ ಹಠಾತ್ ಹಿಂಸಾರೂಪಕ್ಕೆ ತಿರುಗಿ ಅಪಾರ ಸಾವು- ನೋವು ಉಂಟಾಗಿದೆ. ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ಹತ್ತು ತಿಂಗಳಿಂದ ರೈತರು , ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಿಸಾನ್ ಸಭೆಗಳನ್ನು ನಡೆಸುವ ಮೂಲಕ ಸರಕಾರದ ಮೇಲೆ ಒತ್ತಡ ತೀವ್ರಗೊಳಿಸಲಾಗಿದೆ. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಭಾನುವಾರ ಸಚಿವರಿಬ್ಬರು ಘಟನಾ ಸ್ಥಳಕ್ಕೆ ಧಾವಿಸಿದಾಗ ರೈತರಿಂದ ಉಗ್ರ ಪ್ರತಿಭಟನೆ ವ್ಯಕ್ತವಾಯಿತು. ರೈತರ ಮೇಲೆ ನುಗ್ಗಿದ ಕಾರು: ಲಖೀಮ್‌ಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಭೇಟಿಗಾಗಿ ಡೆಪ್ಯುಟಿ ಸಿಎಂ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ಬೆಂಗಾವಲು ಪಡೆಯೊಂದಿಗೆ ಧಾವಿಸಿದರು. ಇದಕ್ಕೂ ಮೊದಲೇ ಸುದ್ದಿ ತಿಳಿದ ರೈತರು ರಸ್ತೆ ಅಡ್ಡಗಟ್ಟಿ , ಕಪ್ಪು ಬಾವುಟ ಪ್ರದರ್ಶಿಸಿ ಸಚಿವರ ವಿರುದ್ಧ ಘೋಷಣೆ ಕೂಗಿದರು. ಸಚಿವರ ಕಾರುಗಳು ಮುಂದೆ ಹೋಗಲು ಬಿಡದೇ ನೂಕುನುಗ್ಗಲು ನಡೆಸಿದರು. ‘ಈ ವೇಳೆ ವಿಚಲಿತಗೊಂಡ ಬೆಂಗಾವಲು ಪಡೆಯ ಚಾಲಕರಿಬ್ಬರು ಪ್ರತಿಭಟನಾಕಾರರ ಮಧ್ಯ ನುಗ್ಗಿಸಿದರು. ಕಾರುಗಳು ನುಗ್ಗಿದ ರಭಸಕ್ಕೆ ನಾಲ್ವರು ಪ್ರತಿಭಟನಾಕಾರರು ಸ್ಥಳದಲ್ಲಿಯೇ ಮೃತಪಟ್ಟರು. ಅನೇಕರಿಗೆ ಗಂಭೀರ ಗಾಯಗಳಾಗಿವೆ’ ಎಂದು ಪ್ರತ್ಯಕ್ಷದರ್ಶಿ ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರ ಮೇಲೆ ನುಗ್ಗಿದ್ದ ಕಾರೊಂದರಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ಆರೋಪಿಸಲಾಗಿದೆ. ಸಚಿವರ ಪುತ್ರನ ಕಾರಿಗೆ ಸಿಲುಕಿಯೇ ಎಂಟು ರೈತರು ಮೃತಪಟ್ಟಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಎಂಟು ರೈತರಲ್ಲ, ನಾಲ್ವರು ರೈತರು ಕಾರಿಗೆ ಸಿಲುಕಿಯೇ ಮೃತಪಟ್ಟಿದ್ದು, ಬಳಿಕ ಉಂಟಾದ ಹಿಂಸಾಚಾರದಲ್ಲಿ ಉಳಿದ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಬೆಂಗಾವಲು ಪಡೆ ಕಾರುಗಳು ರೈತರ ಮೇಲೆ ನುಗ್ಗಿದ ತಕ್ಷಣ ಪ್ರತೀಕಾರಕ್ಕೆ ಇಳಿದ ರೈತರು, ಕಲ್ಲು ತೂರಾಟ ನಡೆಸಿದರು. ಆಗ ಎರಡು ಕಾರುಗಳು ಉರುಳಿ ಬಿದ್ದು ಹಲವರು ಪ್ರತಿಭಟನಾಕಾರರ ಕೈಗೆ ಸಿಲುಕಿ ಥಳಿತಕ್ಕೊಳಗಾದರು. ಬಿಜೆಪಿಯ ಮೂವರು ಕಾರ್ಯಕರ್ತರು ಮತ್ತು ಕಾರಿನ ಚಾಲಕನನ್ನು ರೈತರು ಹೊಡೆದು ಸಾಯಿಸಿದರು ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಸಚಿವರ ಸ್ಪಷ್ಟನೆ:ಘಟನೆ ಕುರಿತು ಸಚಿವ ಅಜಯ್ ಮಿಶ್ರಾ ಅವರು ಹೇಳುತ್ತಿರುವುದೇ ಬೇರೆಯಾಗಿದೆ. ‘ಪ್ರತಿಭಟನಾ ಸ್ಥಳಕ್ಕೆ ಕಾರು ತೆರಳಿದಾಗ ಅದರ ಮೇಲೆ ರೈತರು ದಾಳಿ ಮಾಡಿದ್ದಾರೆ. ಮನಸ್ಸಿಗೆ ಬಂದ ಹಾಗೆ ಕಲ್ಲು ತೂರಾಟ ನಡೆಸಿದ್ದಾರೆ. ಏಕಾಏಕಿ ದಾಳಿ ನಡೆದ ಕಾರಣ ಕಾರು ಅಪಘಾತವಾಗಿದೆ. ಆಗ ಕಾರಿಗೆ ಸಿಲುಕಿ ಇಬ್ಬರು ರೈತರು ಮೃತಪಟ್ಟಿದ್ದಾರೆ’ ಎಂದಿದ್ದಾರೆ. ಅಲ್ಲದೆ, ‘ಅಪಘಾತದಲ್ಲಿ ಇಬ್ಬರು ರೈತರು ಮೃತಪಡುತ್ತಲೇ ರೈತರು ಮತ್ತಷ್ಟು ಹಿಂಸಾತ್ಮಕವಾಗಿ ದಾಳಿ ನಡೆಸಿದ್ದಾರೆ. ರೈತರ ದಾಳಿಯಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರು ಹಾಗೂ ಒಬ್ಬ ಕಾರು ಚಾಲಕ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಳೆದ ಜನವರಿ 26ರಂದು ದಿಲ್ಲಿಯಲ್ಲಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲೂ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಜಿಲ್ಲಾಡಳಿತ ಹೇಳಿಕೆ:ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಎಂಟು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮೃತಪಟ್ಟವರಲ್ಲಿ ನಾಲ್ವರು ರೈತರಾದರೆ, ಉಳಿದ ನಾಲ್ವರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಹಿಂಸಾಚಾರದ ಬಳಿಕ ಮಾಹಿತಿ ನೀಡಿದೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಕಾರಣ ಕೂಡಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಪ್ರಸ್ತುತ ಪರಿಸ್ಥಿತಿ ತಹಬಂದಿಗೆ ಬಂದಿದೆ ಎಂದು ತಿಳಿಸಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಸಿಎಂ ಆದಿತ್ಯನಾಥ್ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಲಖಿಮ್‌ಪುರ್ ಖೇರಿಯಲ್ಲಿ ನಡೆದಿರುವ ಘಟನೆ ಅನಿರೀಕ್ಷಿತವಾಗಿದ್ದು, ಇದರಿಂದ ಬೇಸರವಾಗಿದೆ. ರಾಜ್ಯ ಸರ್ಕಾರ ಈ ಘಟನೆ ಕುರಿತು ತಳಮಟ್ಟದಿಂದ ಕೂಲಂಕುಶವಾಗಿ ತನಿಖೆ ಮಾಡಿ ಸತ್ಯಾಂಶವನ್ನು ಬಹಿರಂಗ ಮಾಡುತ್ತದೆ. ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದು ಹೇಳಿದ್ದಾರೆ. ಇಂದು ಪ್ರಿಯಾಂಕಾ ಭೇಟಿಉತ್ತರ ಪ್ರದೇಶದ ಲಖೀಮ್‌ಪುರ ಖೇರಿಗೆ ಸೋಮವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿ ಪ್ರತಿಪಕ್ಷಗಳ ಹಲವು ನಾಯಕರು ಭೇಟಿ ನೀಡಲಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಸೇರಿ ಹಲವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/3othdoi