ಅ.7ಕ್ಕೆ ಮಂಗಳೂರಿಗೆ ರಾಷ್ಟ್ರಪತಿ ಆಗಮನ; ಕೋವಿಂದ್ ಸ್ವಾಗತಿಸಲು ನಗರದಲ್ಲಿ ಭರದ ಸಿದ್ಧತೆ

ಮಂಗಳೂರು: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಮಂಗಳೂರಿಗೆ ಭೇಟಿ, ವಾಸ್ತವ್ಯ ಹೂಡುವ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಮಠಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳೂರಿಗೆ ಬರಲಿರುವ ರಾಷ್ಟ್ರಪತಿಗಳು ಅ.7 ಹಾಗೂ 8ರಂದು ರಾತ್ರಿ ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಷ್ಟ್ರಪತಿಗಳ ಸ್ವಾಗತಕ್ಕೆ ಕದ್ರಿ ಸರ್ಕ್ಯೂಟ್‌ ಹೌಸ್‌ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸ ಭರದಿಂದ ನಡೆಯುತ್ತಿದ್ದು, ಹೊಸ ಸರ್ಕ್ಯೂಟ್‌ ಹೌಸ್‌ ಕಟ್ಟಡವನ್ನು ಸುಣ್ಣ, ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ. ಸಣ್ಣಪುಟ್ಟ ದುರಸ್ತಿ ಕಾರ್ಯವನ್ನು ಕಳೆದ ಕೆಲವು ದಿನಗಳಿಂದ ನಡೆಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲ ಕೆಲಸ ಕಾರ್ಯ ಪೂರ್ಣಗೊಳಿಸಿ ಸ್ವಚ್ಛಗೊಳಿಸುವ ಗುರಿ ನೀಡಲಾಗಿದೆ. ಆವರಣದೊಳಗೆ ಅಲ್ಲಲ್ಲಿ ಬೆಳೆದಿರುವ ಗಿಡಗಂಟಿ, ಹುಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಪೀಠೋಪಕರಣ, ಕರ್ಟನ್‌, ಅಡುಗೆ ಕೋಣೆ ಸೇರಿದಂತೆ ಅಲ್ಲಿನ ಅಗತ್ಯತೆಗಳನ್ನು ಪರಿಶೀಲಿಸಿ, ಉತ್ತಮ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಸರ್ಕ್ಯೂಟ್‌ ಹೌಸ್‌ ಸಂಪರ್ಕ ಕಲ್ಪಿಸುವ ಕದ್ರಿ ಪಾರ್ಕ್, ಕೆಪಿಟಿ ರಸ್ತೆಯನ್ನು ದುರಸ್ತಿಗೊಳಿಸಲಾಗುತ್ತಿದೆ. ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಸರ್ಕ್ಯೂಟ್‌ ಹೌಸ್‌ ಆವರಣಕ್ಕೆ ಹೊಂದಿಕೊಂಡು ನಡೆಯುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ಒಂದೆರಡು ದಿನಗಳಲ್ಲಿ ಬಿಟ್ಟು ಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾರ್ಮಿಕರನ್ನು ಬಳಸಿ ಕೆಲಸ ಕಾರ್ಯ ನಡೆಯುತ್ತಿವೆ. ಕದ್ರಿ ಸರ್ಕ್ಯೂಟ್‌ ಹೌಸ್‌ ಪ್ರವೇಶ ದ್ವಾರದ ಎದುರುಗಡೆಯ ವೃತ್ತವನ್ನು ದುರಸ್ತಿಗೊಳಿಸುವ ಕೆಲಸ ನಡೆಯುತ್ತಿದೆ. ವೃತ್ತದ ಕೆಲವು ಭಾಗಗಳು ಕುಸಿದು ಹೋಗಿದ್ದು, ಅದಕ್ಕೆ ಸಿಮೆಂಟ್‌ ತೇಪೆ ಹಾಕಿ ದುರಸ್ತಿಗೊಳಿಸಲಾಗಿದೆ. ಅಲ್ಲದೆ ವೃತ್ತ ಹಾಗೂ ಸರ್ಕ್ಯೂಟ್‌ ಹೌಸ್‌ ಪ್ರವೇಶ ದ್ವಾರದ ಅಕ್ಕಪಕ್ಕದ ಜಾಗವನ್ನು ಹಸಿರೀಕರಣ ಮಾಡುವ ಕಾಮಗಾರಿಗಳು ನಡೆಯಲಿದೆ. ಬಿಗಿ ಭದ್ರತೆ: ರಾಷ್ಟ್ರಪತಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ ನಗರದ ಸರ್ಕ್ಯೂಟ್‌ ಹೌಸ್‌ ಪರಿಸರದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ. ಶಿಷ್ಟಾಚಾರದಂತೆ ರಾಷ್ಟ್ರಪತಿ ಭದ್ರತೆ ಹೊತ್ತಿರುವ ಅಧಿಕಾರಿಗಳು ಇಲ್ಲಿ ಕೈಗೊಂಡಿರುವ ಭದ್ರತೆ ಬಗ್ಗೆ ಜಿಲ್ಲಾಡಳಿತದ ಜತೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ್ದಾರೆ. ಸ್ಥಳೀಯ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳ ತಂಡ ಕೂಡ ಸರ್ಕ್ಯೂಟ್‌ ಹೌಸ್‌ ಹಾಗೂ ವಿಮಾನ ನಿಲ್ದಾಣದಿಂದ ಬರುವ ರಸ್ತೆಯುದ್ದಕ್ಕೂ ಬಿಗಿ ಭದ್ರತೆ ನೀಡಲು ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ರಸ್ತೆಗಳಿಗೆ ತೇಪೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಸರ್ಕ್ಯೂಟ್‌ ಹೌಸ್‌ ವರೆಗಿನ ರಸ್ತೆಯಲ್ಲಿಎಲ್ಲೂ ಹೊಂಡ, ಗುಂಡಿಗಳು ಇಲ್ಲದಂತೆ ತೇಪೆ ಹಾಕುವ ಕೆಲಸ ನಡೆಯುತ್ತಿದೆ. ಅವೈಜ್ಞಾನಿಕ ಹಂಫ್ಸ್‌ಗಳನ್ನು ತೆರವುಗೊಳಿಸಬೇಕಾಗುತ್ತದೆ. ರಾಷ್ಟ್ರಪತಿಗಳ ಕಾರ್ಯಕ್ರಮಅ.6ರಿಂದ ರಾಷ್ಟ್ರಪತಿಗಳ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಮುಗಿಸಿ ಶೃಂಗೇರಿ ಮಠಕ್ಕೆ ಭೇಟಿ ನೀಡುವ ಪ್ರಯುಕ್ತ ಅ.7ರಂದು ಸಂಜೆ ಮಂಗಳೂರಿಗೆ ಆಗಮಿಸಿ ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆ.8ರಂದು ಬೆಳಗ್ಗೆ ಮಂಗಳೂರಿನಿಂದ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಸಂಜೆ ಮರಳಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.9ರಂದು ಬೆಳಗ್ಗೆ ಸಕ್ರ್ಯೂಟ್‌ ಹೌಸ್‌ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದಿಲ್ಲಿಗೆ ತೆರಳಲಿದ್ದಾರೆ.


from India & World News in Kannada | VK Polls https://ift.tt/2Yd9CzP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...