ಹೊಸದಿಲ್ಲಿ: ಲಡಾಕ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯಲ್ಲಿ ಚೀನಾ ಹೊಸ ಸೇನಾ ನೆಲೆಗಳನ್ನು ನಿರ್ಮಿಸುವುದರ ಜತೆಗೆ ಶಸ್ತ್ರಸಜ್ಜಿತ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದರ ನಡುವೆಯೇ ಕೂಡ ತಿರುಗೇಟು ಕೊಡುವ ಸಿದ್ಧತೆ ಆರಂಭಿಸಿದೆ. ಭಾರತ-ಚೀನಾ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಶೆಲ್ ದಾಳಿ ನಡೆಸಿ ಶತ್ರುಪಡೆಯನ್ನು ಛಿದ್ರಗೊಳಿಸುವ ಸಾಮರ್ಥ್ಯದ ಸ್ವಯಂಚಾಲಿತ ಹೊವಿಟ್ಜರ್ 'ಕೆ9- ವಜ್ರ'ವನ್ನು ಗಡಿ ಭದ್ರತಾ ಪಡೆ ನಿಯೋಜಿಸಿದೆ. ''ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಗಡಿಯಲ್ಲಿ ತನ್ನ ಪಡೆಗಳನ್ನು ದಿನೇ ದಿನೆ ಹೆಚ್ಚಿಸುತ್ತಿದೆ. ಈ ಬಗ್ಗೆ ಸೂಕ್ಷ್ಮವಾಗಿ ನಿಗಾ ಇಟ್ಟಿದ್ದೇವೆ. ಗಡಿಯಲ್ಲಿ ಚೀನಾ ಹೆಚ್ಚಿಸುತ್ತಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಅರಿವು ಇದೆ. ಯಾವುದೇ ರೀತಿಯನ್ನು ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ನಾವೂ ಹಿಂದೆ ಬಿದ್ದಿಲ್ಲ. ಚೀನಾದ ಅತಿಕ್ರಮಣ ಕ್ಯಾತೆಗೆ ಶೆಲ್ ದಾಳಿ ಮೂಲಕ ಖಡಕ್ ಪ್ರತ್ಯುತ್ತರ ನೀಡಲು ಭಾರತ ಸೇನೆಯು 'ವಜ್ರ'ದ ದೊಡ್ಡ ತುಕಡಿಯನ್ನೇ ಸನ್ನದ್ಧವಾಗಿರಿಸಿದ್ದೇವೆ," ಎಂದು ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ. ವಜ್ರದ ಜತೆಗೆ ಕಳೆದ ಆಗಸ್ಟ್‌ನಿಂದ ಟಿ-90 ಯುದ್ಧ ಟ್ಯಾಂಕರ್‌ಗಳನ್ನು ಕೂಡ ಲಡಾಕ್‌ನಲ್ಲಿ ಭೂಸೇನಾ ಪಡೆಯು ನಿಯೋಜಿಸಿರುವುದು ಗಮನಾರ್ಹ. ಪೂರ್ವ ಲಡಾಕ್‌ನ ಎಲ್‌ಎಸಿಯಲ್ಲಿ ಚೀನಾದ ಮಿಲಿಟರಿ ಪಡೆಗಳ ಹೆಚ್ಚಳದ ಬಗ್ಗೆ ಶುಕ್ರವಾರ ಜನರಲ್ ನರವಾಣೆ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದರ ಬೆನ್ನಿಗೇ ಕೆ-9 ವಜ್ರ ನಿಯೋಜನೆಗೊಂಡಿವೆ. ಹಂತಹಂತವಾಗಿ ಬಿಕ್ಕಟ್ಟು ಶಮನ ಪೂರ್ವ ಲಡಾಕ್‌ನಲ್ಲಿ ಅತಿಕ್ರಮಣ ಯತ್ನದ ಮೂಲಕ ಚೀನಾ ಸೈನಿಕರು ಉಂಟುಮಾಡಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಹಂತ ಹಂತವಾಗಿ ಒಂದೊಂದೇ ವಿಚಾರಗಳನ್ನು ಕೈಗೆತ್ತಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿದೆ. ಕಳೆದ ಜುಲೈ 31ರಂದು ನಡೆದ 12ನೇ ಕಮಾಂಡರ್‌ಗಳ ಮಟ್ಟದ ಸಭೆಯಲ್ಲಿ ಗೊಗ್ರಾ ಪ್ರದೇಶದಲ್ಲಿ ಚೀನಾ ಸೈನಿಕರ ಅತಿಕ್ರಮಣವನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಪಿಎಲ್‌ಎ ಪಡೆಯನ್ನು ಹಿಂದಕ್ಕೆ ಕಳುಹಿಸಲಾಯಿತು. ಮುಂದಿನ ಚರ್ಚೆ ವೇಳೆ ಹಾಟ್‌ಸ್ಟ್ರಿಂಗ್ ಬಳಿಯ ಕೊಂಗ್ಕಾ ಲಾ ಮತ್ತು ಡೆಮ್‌ಚೊಕ್‌ನಲ್ಲಿನ ಉಭಯ ಮಿಲಿಟರಿಗಳ ಬಿಕ್ಕಟ್ಟು ಶಮನಕ್ಕೆ ಆದ್ಯತೆ ನೀಡಲಾಗುವುದು. ಇಂಡೋ-ಚೀನಾದ 3,488 ಕಿ.ಮೀ. ಉದ್ದನೆಯ ಎಲ್‌ಎಸಿಯಲ್ಲಿ ಈ ರೀತಿ ಘರ್ಷಣೆ ಇರುವ ಒಟ್ಟು 18 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶೀಯ ಧ್ವಂಸಕ 'ಕೆ9 ವಜ್ರ' ದಕ್ಷಿಣ ಕೊರಿಯಾ ತಯಾರಿಸುವ 'ಕೆ9- ಥಂಡರ್' ಎಂಬ ಶೆಲ್ ದಾಳಿಯ ಹೊವಿಟ್ಜರ್‌ನ ದೇಶೀಯ ಹಾಗೂ ಉನ್ನತೀಕರಿಸಲಾದ ಆವೃತ್ತಿಯೇ 'ಕೆ9- ವಜ್ರ'. ಮುಂಬಯಿ ಮೂಲದ ಲಾರ್ಸನ್ ಆ್ಯಂಡ್ ಟರ್ಬೋ ಕಂಪನಿಯು ಇದನ್ನು ತಯಾರಿಸುತ್ತದೆ. 52 ಕಿ.ಮೀ. ದೂರದಲ್ಲಿನ ಶತ್ರುಪಡೆಯನ್ನು ಕ್ಷಣಮಾತ್ರದಲ್ಲಿ ಶೆಲ್ ಸ್ಫೋಟದ ಮೂಲಕ ಧ್ವಂಸ ಮಾಡುವ ಸಾಮರ್ಥ್ಯವು ಈ ಹೊವಿಟ್ಜರ್‌ಗಿದೆ. ಸುಮಾರು 100 ಹೊವಿಟ್ಜರ್‌ಗಳು ಈಗಾಗಲೇ ಸಮರಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಭೂಸೇನಾ ಪಡೆಯಲ್ಲಿವೆ. ಪ್ರತಿ ಗಂಟೆಗೆ 67 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇರುವ 'ಕೆ9- ವಜ್ರ'ವನ್ನು ಐವರು ಯೋಧರು ಮುನ್ನಡೆಸುತ್ತಾರೆ. ಯಾವುದೇ ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಸ್ಥಿರವಾಗಿ ನಿಂತು ಸತತ ಶೆಲ್ ದಾಳಿ ನಡೆಸುವ ಪರಿಣಿತ ಶಸ್ತ್ರಾಸ್ತ್ರವಿದು. ಲಂಕಾದಲ್ಲಿ ಚೀನಾ ಸಾಮ್ರಾಜ್ಯದ ನಡುವೆ ಭಾರತದ ಹೂಡಿಕೆ ಶ್ರೀಲಂಕಾದ ಪ್ರಮುಖ ಬಂದರುಗಳಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿರುವ ಚೀನಾಕ್ಕೆ ತಿರುಗೇಟು ನೀಡಲು ಭಾರತಕ್ಕೆ ಅದಾನಿ ಸಮೂಹದ ಒಪ್ಪಂದವೊಂದು ನೆರವಾಗಲಿದೆ. ಕೊಲೊಂಬೊ ಬಂದರಿನ ಪೂರ್ವ ಕಂಟೇನರ್ ಟರ್ಮಿನಲ್ ಅಭಿವೃದ್ಧಿಯ ಒಪ್ಪಂದವನ್ನು ಭಾರತ-ಜಪಾನ್ ಜತೆಗೆ ನಡೆಸಬೇಕಿದ್ದ ಶ್ರೀಲಂಕಾ ಸರಕಾರವು ಕಡೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಆದರೆ ಸದ್ಯ, ಗುಜರಾತ್ ಮೂಲದ ಅದಾನಿ ಸಮೂಹದ ಜತೆಗೆ ಕೊಲೊಂಬೊ ಬಂದರಿನ ಮತ್ತೊಂದು ಟರ್ಮಿನಲ್ ಅಭಿವೃದ್ಧಿಗೆ 700 ದಶಲಕ್ಷ ಡಾಲರ್ ಮೊತ್ತದ ಒಪ್ಪಂದವನ್ನು ಶ್ರೀಲಂಕಾ ಸರಕಾರ ಮಾಡಿಕೊಂಡಿದೆ. ಪಶ್ಚಿಮ ಕಂಟೇನರ್ ಟರ್ಮಿನಲ್ ಅಭಿವೃದ್ಧಿಯ ಈ ಒಪ್ಪಂದವು ಲಂಕಾದಲ್ಲಿ ಚೀನಾದ ಭಾರಿ ಹೂಡಿಕೆಗಳ ನಡುವೆ ಭಾರತದ ಖಾಸಗಿ ಕಂಪನಿಯೊಂದು ಸ್ಥಾನ ಕಲ್ಪಿಸಿಕೊಳ್ಳಲು ನೆರವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ಹರ್ಷ ಶೃಂಗ್ಲಾ ಹೇಳಿದ್ದಾರೆ. ಪೂರ್ವ ಟರ್ಮಿನಲ್ ಅಭಿವೃದ್ಧಿ ಕುರಿತು ಮತ್ತೊಮ್ಮೆ ಶ್ರೀಲಂಕಾ ಸರಕಾರದ ಮನವೊಲಿಸಲು ಶೃಂಗ್ಲಾಅವರು ನಾಲ್ಕು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇಂಡೋ ಪೆಸಿಫಿಕ್ ಸಾಗರದಲ್ಲಿ ಚೀನಾವು ತನ್ನ ಅಧಿಪತ್ಯ ಸ್ಥಾಪಿಸಲು ಅವಕಾಶ ನೀಡಬಾರದು ಎನ್ನುವ ಸಂಕಲ್ಪಕ್ಕೆ ಪೂರಕವಾದ ಎಲ್ಲ ಕ್ರಮವನ್ನು ಭಾರತವು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ.
from India & World News in Kannada | VK Polls https://ift.tt/3l5mbp6