ಬೆಂಗಳೂರು: ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ವಿಧಾನಮಂಡಲ ಅಧಿವೇಶನ ನಿನ್ನೆಯಿಂದ ಆರಂಭಗೊಂಡಿದೆ. ಕೊರೊನಾ ಭೀತಿಯಿಂದ ಅಧಿವೇಶನವನ್ನು ಮೂರೇ ದಿನಕ್ಕೆ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ವಿಪಕ್ಷಗಳ ಬಳಿ ವಿನಂತಿಸಿದರೂ ವಿರೋಧ ಪಕ್ಷಗಳು ಇದಕ್ಕೆ ಒಪ್ಪದ ಕಾರಣ ನಂತರ ನಡೆದ ಸದನ ಸಲಹಾ ಸಮಿತಿಯ ತೀರ್ಮಾನದಂತೆ ಶನಿವಾರದ ತನಕ ಅಧಿವೇಶನವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಕಲಾಪ ಆರಂಭಗೊಂಡಿದೆ. ಮೊದಲು ವಿಧಾನಸಭೆಯಲ್ಲಿ ಮಾತನಾಡಿದ ಸ್ಪೀಕರ್ , ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಅಧಿವೇಶನ ಹೆಚ್ಚು ಜವಾಬ್ದಾರಿಯುತವಾಗಿ ನಡೆಸಬೇಕು ಎಂದು ಸರ್ಕಾರ ಮತ್ತು ವಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ. ಕೊರೊನಾ ರೋಗದ ಕಾರಣದಿಂದಾಗಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದೇವೆ ಎಂದಿರುವ ಸ್ಪೀಕರ್ ಕಾಗೇರಿ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಇದ್ದರೂ ಕೂಡ ಕೆಲವು ಸದಸ್ಯರು ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಶಾಸಕರು, ಸಚಿವರಿಗೆ ಕೇಳಿಕೊಳ್ಳುತ್ತೇನೆ ಎಂದು ಸ್ಪೀಕರ್ ಸೂಚನೆ ನೀಡಿದ್ದಾರೆ. ಅಲ್ಲದೇ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ವೈದ್ಯಕೀಯ ತಪಾಸಣೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಅಲ್ಲದೇ ನಿಯೋಗಗಳನ್ನು ವಿಧಾನಸೌಧದಲ್ಲಿ ಭೇಟಿಯಾಗಬಾರದು ಎಂದು ಶಾಸಕ, ಸಚಿವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.
from India & World News in Kannada | VK Polls https://ift.tt/3011MqC