ಅಬು ಧಾಬಿ: ಸತತ ಎರಡು ಪಂದ್ಯಗಳಲ್ಲಿ ಸೋತು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿದಿರುವ ಟೀಮ್ ಇಂಡಿಯಾ ಬುಧವಾರ ವಿರುದ್ಧ ತನ್ನ ಮೂರನೇ ಪಂದ್ಯದಲ್ಲಿ ಸೆಣಸಲು ಸಜ್ಜಾಗುತ್ತಿದೆ. ಉಭಯ ತಂಡಗಳ ಈ ಮಹತ್ವದ ಕಾದಾಟಕ್ಕೆ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ಟೂರ್ನಿಗೂ ಮುನ್ನ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಟೀಮ್ ಇಂಡಿಯಾ, ಸೂಪರ್ 12ರ ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ನಂತರ, ಸೆಮಿಫೈನಲ್‌ಗೆ ಆರಾಮದಾಯವಾಗಿ ತಲುಪಲು ನ್ಯೂಜಿಲೆಂಡ್ ವಿರುದ್ಧ ಗೆಲುವು ಅಗತ್ಯವಿತ್ತು. ಆದರೆ, ಈ ಪಂದ್ಯದಲ್ಲಿಯೂ 8 ವಿಕೆಟ್‌ಗಳಿಂದ ಹೀನಾಯ ಪರಾಭವಗೊಂಡಿತು. ಈ ಎರಡು ಸೋಲುಗಳಿಂದ ಭಾರತ ತಂಡದ ಸೆಮಿಫೈನಲ್ ಬಾಗಿಲು ಬಹುತೇಕ ಬಂದ್ ಆಗಿದೆ. ಇದರ ಹೊರತಾಗಿಯೂ ಕೊಹ್ಲಿ ಪಡೆ ಸೆಮಿಫೈನಲ್ ತಲುಪಲು ಇನ್ನೂ ಅಂಕಿಅಂಶಗಳ ಪ್ರಕಾರ ಅವಕಾಶವಿದೆ. ಇನ್ನುಳಿದ ಮೂರೂ ಪಂದ್ಯಗಳಲ್ಲಿ ಭಾರತ ಹೆಚ್ಚಿನ ರನ್‌ರೇಟ್‌ನಲ್ಲಿ ಗೆಲ್ಲಬೇಕು, ನ್ಯೂಜಿಲೆಂಡ್ ತಂಡ ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಅನುಭವಿಸಬೇಕು. ಆಗ, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಖಾತೆಯಲ್ಲಿ ತಲಾ 6 ಅಂಕಗಳಿದ್ದು, ಆಗ ರನ್‌ರೇಟ್ ಆಧಾರದ ಮೇಲೆ ಒಂದು ತಂಡ ಸೆಮಿಫೈನಲ್‌ಗೆ ಪ್ರವೇಶಿಸಬಹುದು. ಆದರೆ, ನ್ಯೂಜಿಲೆಂಡ್‌ಗೆ ಇನ್ನುಳಿದ ಪಂದ್ಯಗಳಲ್ಲಿ ಕಠಿಣ ಸವಾಲು ಎದುರಾಗುವುದು ಬಹುತೇಕ ಕಡಿಮೆ. ಮೂರು ತಂಡಗಳ ಪೈಕಿ ಅಫ್ಗಾನಿಸ್ತಾನ ವಿರುದ್ಧ ಮಾತ್ರ ಕಿವೀಸ್‌ಗೆ ಪ್ರಬಲ ಪೈಪೋಟಿ ನಿರೀಕ್ಷಿಸಬಹುದು. ಆದರೆ, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಸುಲಭವಾಗಿ ವಿಲಿಯಮ್ಸನ್ ಪಡೆ ಗೆಲುವು ಪಡೆಯಲಿದೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಹಾಗೂ ಅಫ್ಗಾನಿಸ್ತಾನ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಅಫ್ಗಾನಿಸ್ತಾನ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಸೋತು, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಗೆದ್ದು ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳ ಪೈಕಿ ಭಾರತ ತಂಡಕ್ಕೆ ಅಫ್ಗಾನಿಸ್ತಾನ ವಿರದ್ಧ ಪ್ರಬಲ ಪೈಪೋಟಿ ನಿರೀಕ್ಷಿಸಬಹುದು. ಪಿಚ್ ರಿಪೋರ್ಟ್: ಇಲ್ಲಿನ ಶೇಖ್ ಜಾಯೆದ್ ಕ್ರೀಡಾಂಗಣದ ಪಿಚ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಿಲ್ಲ. ಟಿ20 ಸ್ವರೂಪದಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ 139 ರನ್‌ಗಳಾಗಿದ್ದು, ದ್ವಿತೀಯ ಇನಿಂಗ್ಸ್‌ನಲ್ಲಿ ಸರಾಸರಿ ಮೊತ್ತ 127 ರನ್ ಆಗಿದೆ. ಅಫ್ಗಾನಿಸ್ತಾನ ತನ್ನ ಕಳೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 160 ರನ್ ಕಲೆಹಾಕಿತ್ತು. ನಂತರ 62 ರನ್‌ಗಳಿಂದ ಗೆದ್ದು ಬೀಗಿತ್ತು. ಅಂದಹಾಗೆ ಇಲ್ಲಿನ ವಿಕೆಟ್ ಸ್ಪಿನ್ನರ್‌ಗಳಿಗೆ ಸ್ನೇಹಿಯಾಗಿದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವನ್ ಭಾರತ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ/ ಇಶಾನ್ ಕಿಶನ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್/ ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್/ ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ. ಅಫ್ಗಾನಿಸ್ತಾನ: ಹಜರತುಲ್ಹಾ ಝಜೈ, ಮೊಹಮ್ಮದ್ ಶಹಜಾದ್ (ವಿ.ಕೀ), ರಹಮಾನುಲ್ಹಾ ಗರ್ಬಾಝ್, ಅಸ್ಗರ್ ಅಫ್ಘಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಂ ಜನತ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್ ಪಂದ್ಯದ ವಿವರ ಭಾರತ vs ಅಫ್ಗಾನಿಸ್ತಾನ ದಿನಾಂಕ: ನ.3, 2021 ಸಮಯ: ರಾತ್ರಿ: 07:30ಕ್ಕೆ ಸ್ಥಳ: ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣ, ಅಬು ಧಾಬಿ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31oFeDG