ಹೊಸದಿಲ್ಲಿ: ಹಿರಿಯ ಆಟಗಾರರ ಬದಲು ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ನಿಯಂತ್ರಣ ಮಂಡಳಿ ಚಿಂತನೆ ನಡೆಸಬೇಕೆಂದು ಭಾರತ ತಂಡದ ಮಾಜಿ ನಾಯಕ ಸಲಹೆ ನೀಡಿದ್ದಾರೆ. ಕಳೆದ ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಆ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕಪಿಲ್ ದೇವ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಭಾರತ ತಂಡ ಗೆದ್ದರೂ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವುದು ಬಹುತೇಕ ಅನುಮಾನ. ಆದರೆ, ಅಫ್ಗಾನಿಸ್ತಾನ ಅಥವಾ ಸ್ಕಾಂಟ್ಲೆಂಡ್ ಅಥವಾ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಯಾವುದಾದರೂ ಒಂದು ಪಂದ್ಯದಲ್ಲಿ ಸೋಲು ಅನುಭವಿಸಬೇಕಾಗುತ್ತದೆ. ಆಗ ಭಾರತಕ್ಕೆ ಅವಕಾಶ ಸಿಗಬಹುದು. ಈ ಹಂತದಲ್ಲಿ ಬೇರೆ ತಂಡಗಳ ಯಶಸ್ಸನ್ನು ನಾವು ಅವಲಂಬಿಸುವುದು ಭಾರತೀಯ ಕ್ರಿಕೆಟ್ ಪಾಲಿಗೆ ಒಳಿತಲ್ಲ. ತಂಡದಲ್ಲಿ ದೊಡ್ಡ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ, ಹೊಸ ತಲೆಮಾರಿನ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಬೇಕಾದ ಸಮಯ ಬಂದಿದೆ ಎಂಬುದು ಕಪಿಲ್ ದೇವ್ ಅಭಿಪ್ರಾಯ. "ಬೇರೆ ತಂಡಗಳ ಮೇಲೆ ಅವಲಂಬನೆಯಾಗುವ ಮೂಲಕ ಯಶಸ್ವಿಯಾಗುವುದನ್ನು ಭಾರತೀಯ ಕ್ರಿಕೆಟ್ ಪ್ರಶಂಸಿಸುವುದಿಲ್ಲ. ನೀವು ವಿಶ್ವಕಪ್ ಗೆಲ್ಲಬೇಕೆಂದರೆ ಅಥವಾ ಸೆಮಿಫೈನಲ್ ತಲುಪಬೇಕೆಂದರೆ ನಿಮ್ಮ ಸ್ವಂತ ಸಾಮರ್ಥ್ಯದ ಮೂಲಕ ಬನ್ನಿ. ಆದರೆ, ಬೇರೆ ತಂಡಗಳನ್ನು ಅವಲಂಬನೆಯಾಗುವುದು ಒಳ್ಳೆಯದಲ್ಲ. ದೊಡ್ಡ ಆಟಗಾರರು ಹಾಗೂ ಭವಿಷ್ಯದ ದೊಡ್ಡ ಆಟಗಾರರ ಬಗ್ಗೆ ಆಯ್ಕೆದಾರರು ನಿರ್ಧರಿಸುವ ಸಮಯ ಬಂದಾಗಿದೆ," ಎಂದು ಕಪಿಲ್ ದೇವ್ ಎಬಿಪಿ ನ್ಯೂಸ್‌ಗೆ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವೈಫಲ್ಯಕ್ಕೆ ಹಲವು ಕಾರಣಗಳಿದ್ದು ಬಯೋ-ಬಬಲ್, ಬಿಡುವಿಲ್ಲದ ವೇಳಾಪಟ್ಟಿ, ತಂಡದ ಆಯ್ಕೆ ಈ ಪಟ್ಟಿಯಲ್ಲಿ ಪ್ರಮುಖ ಅಂಶಗಳಾಗಿವೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಹಾಗೂ ತಾಜಾತನದಿಂದ ಕೂಡಿರುವ ಹಲವು ಆಟಗಾರರಿದ್ದಾರೆ. ಹಾಗಾಗಿ ಇವರನ್ನು ಭಾರತೀಯ ಕ್ರಿಕೆಟ್‌ನ ಮುಂದಿನ ತಲೆಮಾರಿನ ಆಟಗಾರರೆಂದು ಗುರುತಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. "ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರ ಬಗ್ಗೆ ಚಿಂತಿಸುವ ಸಮಯ ಇದು. ಒಂದು ವೇಳೆ ಯುವ ಆಟಗಾರರು ವಿಫಲರಾದರೂ ಅವರಿಗೆ ಉತ್ತಮ ಅನುಭವವಾಗುತ್ತದೆ. ಆದರೆ, ಅನುಭವಿ ಆಟಗಾರರು ಉತ್ತಮ ಪ್ರದರ್ಶನ ತೋರದೆ ಇದ್ದಲ್ಲಿ ಟೀಕೆಗಳಿಗೆ ಗುರಿಯಾಗುತ್ತಾರೆ. ಹಾಗಾಗಿ, ಯುವ ಆಟಗಾರರನ್ನು ಕರೆ ತರಲು ಪ್ರಯತ್ನಿಸಬೇಕು," ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Y9yfgv