ರವಿರಾಜ್ ಆರ್.ಗಲಗಲಿ ಬಾಗಲಕೋಟೆ ಬಾಗಲಕೋಟೆ: ಈ ಬಾರಿಯ ಕೇವಲ ಜನರಿಗಷ್ಟೇ ಅಲ್ಲ, ಮಾರುಕಟ್ಟೆಗೂ ಚೇತರಿಕೆಯ ಬೆಳಕು ನೀಡಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದ ನಲುಗಿದ್ದ ಮಾರುಕಟ್ಟೆಯಲ್ಲೀಗ ಜನ ಕಾಣಿಸುತ್ತಿದ್ದಾರೆ. ದೀಪಾವಳಿ ನೆಪದಲ್ಲಿ ನಾನಾ ವಸ್ತುಗಳ ಬುಕ್ಕಿಂಗ್ ನಡೆಯುತ್ತಿವೆ, ವಹಿವಾಟಿನಲ್ಲಿ ಆಶಾದಾಯಕ ಬೆಳವಣಿಗೆಯಿದೆ. ಚಿನ್ನಕ್ಕೆ ಬೇಡಿಕೆ ವರ್ಷದ ಅತ್ಯಂತ ದೊಡ್ಡ ಹಬ್ಬವಾದ ದೀಪಾವಳಿಗೆ ಮಾರುಕಟ್ಟೆಯ ವೈಭವ ಮರುಕಳಿಸುವ ಎಲ್ಲ ಸಾಧ್ಯತೆಯಿದೆ. ತುಳಸಿ ಲಗ್ನದ ನಂತರ ಮದುವೆಗಳ ಸೀಸನ್ ಆರಂಭಗೊಳ್ಳಲಿದ್ದು, ಚಿನ್ನಾಭರಣ ದೀಪಾವಳಿ ಪಾಡ್ಯದಂದೇ ಬುಕ್ ಆಗುತ್ತವೆ. ಚಿನ್ನದ ದರ ಹೆಚ್ಚಳವಾಗಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಚಿನ್ನ ಪ್ರಿಯರು ಗಟ್ಟಿ ಬಂಗಾರಕ್ಕಿಂತ ಆಭರಣಗಳತ್ತ ಹೆಚ್ಚು ಮನಸ್ಸು ಮಾಡಿದ್ದಾರೆ. ಪರಿಣಾಮ ಆಭರಣ ಮಳಿಗೆಗಳಲ್ಲಿ ಕಳೆದ ಒಂದು ವಾರದಿಂದ ಜನಸಂದಣಿ ಹೆಚ್ಚಿದೆ. ಮಂಗಳವಾರ ಚಿನ್ನದ ದರ ತೊಲಕ್ಕೆ 49, 700 ರೂ. ತಲುಪಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಧಾರಣೆ ಕಡಿಮೆಯಾಗಿರುವುದೂ ಕೂಡ ಪ್ಲಸ್ ಪಾಯಿಂಟ್. ದೀಪಾವಳಿಯ ಪಾಡ್ಯದಂದು ಚಿನ್ನ ಖರೀದಿ ಅದೃಷ್ಟಕರ ಎಂಬ ನಂಬಿಕೆಯೂ ವಹಿವಾಟು ಹೆಚ್ಚಳಕ್ಕೆ ಕಾರಣವಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರು ಮನೆಗಳಿಂದ ಹೊರಬರಲು ಮೀನಮೇಷ ಎಣಿಸುತ್ತಿದ್ದ ಕಾರಣ ವ್ಯಾಪಾರ ಹೇಳಿಕೊಳ್ಳುವಂತಿರಲಿಲ್ಲ. ಇನ್ನು ಕಳೆದ ವರ್ಷ ಮದುವೆಗಳಿಗೆ ಸರಕಾರ ಮಿತಿ ಹೇರಿದ ಪರಿಣಾಮ ವಧು, ವರರಿಗೆ ಮಾತ್ರ ಚಿನ್ನ ಖರೀದಿಸಲಾಗುತ್ತಿತ್ತು. ಕಳೆದ ವರ್ಷ ಮುಂದೂಡಿದ ಮದುವೆಗಳು ಈ ಬಾರಿ ನಡೆಯಲಿವೆ, ಕೋವಿಡ್ ಭೀತಿ ದೂರವಾಗಿರುವುದರಿಂದ ವಿಜೃಂಭಣೆಯ ಮದುವೆಗಳು ಮತ್ತೆ ನಡೆಯಲಿವೆ. ಖರೀದಿ ಜೋರು ಪಾಡ್ಯದಂದು ಬೈಕ್, ಕಾರ್ ಖರೀದಿಗಾಗಿ ಜನ ಮುಗಿ ಬೀಳುತ್ತಾರೆ. ಬೈಕ್ ಹಾಗೂ ಕಾರ್ ಶೋರೂಂಗಳಲ್ಲಿ ಹೊಸ ವಿನ್ಯಾಸದ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಈಗಾಗಲೇ ಸಾವಿರಾರು ಜನರು ವಾಹನ ಬುಕ್ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ದೀಪಾವಳಿ ಸಂದರ್ಭದಲ್ಲಿ ಖರೀದಿ ನಡೆದಿತ್ತಾದರೂ ಈ ಮಟ್ಟದಲ್ಲಿ ಬೇಡಿಕೆಯಿರಲಿಲ್ಲ. ಸಾಂಪ್ರದಾಯಿಕ ಇಂಧನದ ವಾಹನಗಳೊಂದಿಗೆ ಎಲೆಕ್ಟ್ರಿಕ್ ಬೈಕ್‌ಗಳಿಗೆ ಈ ಬಾರಿ ಬೇಡಿಕೆ ಬಂದಿದೆ. ಬಹುತೇಕ ಎಲೆಕ್ಟ್ರಿಕ್ ವಾಹನ ಶೋರೂಂಗಳಲ್ಲಿ ವಾಹನ ಬುಕ್ ಆಗಿವೆ. ಇನ್ನು ಭಾರಿ ಬೇಡಿಕೆಯಿಂದ ಪೂರೈಕೆ ನಿಧಾನವಾಗಲಿದೆ ಎಂಬ ಮಾತಿದೆ. ದೀಪಗಳ ಹಬ್ಬದಲ್ಲಿ ಫ್ರಿಡ್ಜ್, ಟಿವಿ, ಎಲೆಕ್ಟ್ರಾನಿಕ್ ವಸ್ತುಗಳನ್ನೂ ಖರೀದಿಸಿ ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಬಗೆ ಬಗೆ ಆಫರ್‌ಗಳು ಬಂದಿವೆ. ಇದರೊಂದಿಗೆ ಬಟ್ಟೆ ಖರೀದಿಯೂ ಜೋರಾಗಿದ್ದು, ಜನಜೀವನ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಇದು ಮಾರುಕಟ್ಟೆಯ ಚೇತರಿಕೆಗೆ ಉತ್ಸಾಹ ಮೂಡಿಸಿದೆ. ಕೋವಿಡ್ ನಿಧಾನವಾಗಿ ಮರೆಯಾಗುತ್ತಿದ್ದಂತೆ ಜನರಲ್ಲಿನ ಆತಂಕ ದೂರವಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಚಿನ್ನದ ಚೇತರಿಕೆ ಕಾಣುತ್ತಿದೆ. ವ್ಯಾಪಾರ, ವಹಿವಾಟು ಚೆನ್ನಾಗಿರಲಿದೆ ಎಂಬುದಕ್ಕೆ ಆಶಾದಾಯಕ ವಾತಾವರಣವಿದೆ. ಮಲ್ಲಿಕಾರ್ಜುನ ಶೀಲವಂತ, ಚಿನ್ನದ ವ್ಯಾಪಾರಿ
from India & World News in Kannada | VK Polls https://ift.tt/3oawGYX