ಹೊಸದಿಲ್ಲಿ: ಅಭಿಮಾನಿಗಳ ಒತ್ತಾಯದ ಮೇರೆಗೆ 2022ರ ಫೆಬ್ರುವರಿ ತಿಂಗಳಲ್ಲಿ ಮತ್ತೆ ಅಂಗಣಕ್ಕೆ ಮರಳುತ್ತೇನೆಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಮಾಹಿತಿ ನೀಡಿದ್ದಾರೆ. ಆದರೆ, ಅವರು ಯಾವ ಸ್ಪರ್ಧೆಗೆ ಕಣಕ್ಕೆ ಇಳಿಯಲಿದ್ದಾರೆಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಅತ್ಯಂತ ಹೀನಾಯ ಪ್ರದರ್ಶನ ತೋರುತ್ತಿದೆ. ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧ ಕೂಡ 8 ವಿಕೆಟ್‌ಗಳಿಂದ ಪರಾಭವಗೊಡಿತ್ತು. ಈ ಸೋಲಿನೊಂದಿಗೆ ಭಾರತ ತಂಡದ ಸೆಮಿಫೈನಲ್ ಹಾದಿ ಬಹುತೇಕ ಬಂದ್ ಆಯಿತು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಅಭಿಮಾನಿಗಳು ಟೀಮ್ ಇಂಡಿಯಾವನ್ನು ಟೀಕಿಸುವ ಜೊತೆಗೆ, ಕೆಲ ದಿಗ್ಗಜ ಆಟಗಾರರ ಮರಳುವಿಕೆಗೆ ಆಗ್ರಹಿಸಿದರು. ಅದರಂತೆ ಭಾರತ ತಂಡಕ್ಕೆ ನೀವು ಕಮ್‌ಬ್ಯಾಕ್ ಮಾಡಿ ಎಂದು ಅಭಿಮಾನಿಗಳು ಯುವರಾಜ್ ಸಿಂಗ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡರು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಇನ್‌ಸ್ಟಾಗ್ರಾಮ್ ಸೇರಿದಂತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರತಿಕ್ರಿಯಿಸಿದ 2001 ಮತ್ತು 2011ರ ವಿಶ್ವಕಪ್ ವಿಜೇತ ಯುವರಾಜ್, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅಂಗಣಕ್ಕೆ ಮರಳುತ್ತೇನೆಂದು ಮಾಹಿತಿ ನೀಡಿದ್ದಾರೆ. ಆದರೆ, ಯಾವ ಟೂರ್ನಿಗೆ ಮರಳುತ್ತೇನೆಂದು ಅವರು ಸ್ಪಷ್ಟಪಡಿಸಲಿಲ್ಲ. ಅಂದಹಾಗೆ ಇದೇ ಅವಧಿಯಲ್ಲಿ ರೋಡ್ ಸೇಫ್ಟಿ ವಿಶ್ವ ಕ್ರಿಕೆಟ್ ಸರಣಿ ನಡೆಯಬಹುದು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಯುವರಾಜ್ ಸಿಂಗ್, ಭಾರತ ತಂಡದ ಪರ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದ ವಿಡಿಯೋಗೆ ಬಾಲಿವುಡ್ ಹಾಡವೊಂದನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ. ತಾವು ಮುಂದಿನ ವರ್ಷ ಫೆಬ್ರವರಿಯಲ್ಲಿ ಅಂಗಣಕ್ಕೆ ಮರಳುವುದಾಗಿ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. "ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ!! ಸಾರ್ವಜನಿಕರ ಒತ್ತಾಯದ ಮೇರೆಗೆ ಮುಂದಿನ ಫೆಬ್ರವರಿಯಲ್ಲಿ ಮೈದಾನಕ್ಕೆ ಮರಳುತ್ತೇನೆಂಬ ನಿರೀಕ್ಷೆ ಇದೆ! ನಿಮ್ಮ ಪ್ರೀತಿ ಹಾಗೂ ಶುಭಹಾರೈಕೆಗೆ ಧನ್ಯವಾದ. ಭಾರತ ತಂಡಕ್ಕೆ ಸದಾ ಬೆಂಬಲ ನೀಡುತ್ತಿರಿ, ಅದು ನಿಮ್ಮ ತಂಡ. ನಿಜವಾದ ಅಭಿಮಾನಿಗಳು ಕಠಿಣ ಸಂದರ್ಭಗಳಲ್ಲಿಯೂ ಬೆಂಬಲ ನೀಡುತ್ತಾರೆ, " ಎಂದು ಯುವರಾಜ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋಗೆ ಈ ರೀತಿಯ ಶೀರ್ಷಿಕೆ ಬರೆದುಕೊಂಡಿದ್ದಾರೆ. ಕಳೆದ 2019ರಲ್ಲಿ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇದಾದ ಬಳಿಕ ಅವರು ಕೆನಡಾದಲ್ಲಿ ಗ್ಲೋಬಲ್ ಟಿ20 ಕ್ರಿಕೆಟ್ ಟೂರ್ನಿ ಆಡಿದ್ದರು. ನಂತರ, ಚಾರಿಟಿ ಆಧಾರಿತ ರೋಡ್ ಸೇಪ್ಟಿ ವಿಶ್ವ ಕ್ರಿಕೆಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಬಹುಶಃ ಅವರು ಇದೇ ಟೂರ್ನಿ ಆಡಲು ಮುಂದಿನ ಫೆಬ್ರವರಿಯಲ್ಲಿ ಮೈದಾನಕ್ಕೆ ಆಗಮಿಸಬಹುದು. 2007ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಯುವರಾಜ್ ಸಿಂಗ್ ಕೂಡ ಇದ್ದರು. ಈ ಟೂರ್ನಿಯಲ್ಲಿ ಇಂಗ್ಲೆಂಡ್ ಸ್ಟುವರ್ಟ್ ಬ್ರಾಡ್ ಓವರ್‌ಗೆ ಆರು ಸಿಕ್ಸರ್ ಸಿಡಿಸಿ ಯುವರಾಜ್ ಸಿಂಗ್ ದಾಖಲೆ ಮಾಡಿದ್ದರು. ನಂತರ, 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲುವಿನಲ್ಲಿ ಯುವರಾಜ್ ಮಹತ್ವದ ಪ್ರದರ್ಶನ ತೋರಿದ್ದರು. ಯುವರಾಜ್ ಸಿಂಗ್ ಒಟ್ಟು 11,778 ಅಂತಾರಾಷ್ಟ್ರೀಯ ರನ್ ಹಾಗೂ 148 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3w6gQ55