ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಮಾರ್ಗಕ್ಕೆ ಜಯದೇವ ಇಂಟರ್‌ ಚೇಂಜ್‌ ತೊಡಕು..!

: ನಗರದ ಐಟಿ - ಬಿಟಿ ಉದ್ಯೋಗಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ರೈಲು ಸಂಪರ್ಕಕ್ಕೆ ಇಂಟರ್‌ ಚೇಂಜ್‌ ಮೆಟ್ರೋ ಸ್ಟೇಷನ್‌ ಕಾಮಗಾರಿ ವಿಳಂಬದಿಂದ ತುಸು ಹಿನ್ನೆಡೆಯಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ರೈಲು ಮಾರ್ಗದ ಕಾಮಗಾರಿ ಈಗಾಗಲೇ ಅಂತಿಮ ಹಂತದಲ್ಲಿ ಇದೆ. ಶೇಕಡ 90 ರಷ್ಟು ಕೆಲಸ ಮುಗಿದಿದ್ದು, ರೈಲು ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಇದನ್ನು ನೋಡಿದರೆ ಕೆಲವೇ ತಿಂಗಳಲ್ಲಿ ಎಲೆಕ್ಟ್ರಾನಿಕ್‌ ಸಿಟಿಗೆ ರೈಲು ಬರಲಿದೆ ಎಂದೇ ತಿಳಿಯಬೇಕು. ಆದರೆ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಜಯದೇವ ಆಸ್ಪತ್ರೆ ಜಂಕ್ಷನ್‌ ಕಾಮಗಾರಿ ನಿಧಾನವಾಗಿ ಸಾಗಿದೆ. ಬೆಂಗಳೂರು ನಗರದಿಂದ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗಕ್ಕೆ ಮೆಟ್ರೋ ರೈಲು ಸಂಪರ್ಕ ಸಿಗಬೇಕಾದರೆ ಆರ್‌ವಿ ರಸ್ತೆಯಿಂದ ಜಯದೇವ ಆಸ್ಪತ್ರೆ ಮೂಲಕ ರೈಲು ಮಾರ್ಗ ಸಾಗಬೇಕು. ಆದರೆ ಜಯದೇವ ಜಂಕ್ಷನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ನಡೆದಿಲ್ಲ. ಮೇಲು ರಸ್ತೆ ತೆರವು ಹಾಗೂ ಖಾಸಗಿ ಜಾಗ ತೆರವು ವಿಳಂಬವಾಗಿದೆ. ಈ ಕಾಮಗಾರಿ ಮುಗಿಯಲು ಇನ್ನೂ ಒಂದೂವರೆ ವರ್ಷ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಮೆಟ್ರೋ ಎರಡನೇ ಹಂತದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 19 ಕಿ.ಮೀ ಹಳದಿ ಮಾರ್ಗ, ನಗರದಲ್ಲಿಯೇ ಅತಿ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದ ಮಾರ್ಗ. ಈ ಮಾರ್ಗದಲ್ಲಿ ಬಸ್‌, ಕಾರು ಅಥವಾ ಬೈಕ್‌ ಮೂಲಕ ಹೋಗುವುದಾದರೆ ಒಂದು ತಾಸಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ತಲುಪುವುದು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಮೆಟ್ರೋ ಮಾರ್ಗ ಈ ಭಾಗದ ಜನರ ಹಲವು ವರ್ಷಗಳ ಕಾತರದ ಯೋಜನೆಯಾಗಿದೆ. ಇನ್ನೊಂದೆಡೆ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸಾರಿಗೆ ಬಳಸಿ ಹೋಗುವುದಕ್ಕೂ ಸಾಕಷ್ಟು ತೊಂದರೆಯಾಗುತ್ತಿದೆ. ರಸ್ತೆಗಳು ಗುಂಡಿ ಬಿದ್ದು, ಧೂಳಿನಿಂದ ಕೂಡಿವೆ. ಮಳೆ ಬಂದರೆ ಸವಾರರು ಹೈರಾಣಾಗುತ್ತಾರೆ. ಈ ಎಲ್ಲದರಿಂದ ಮುಕ್ತಿ ಪಡೆಯಬೇಕಾದರೆ ಮೆಟ್ರೋ ಸಂಚಾರ ಆರಂಭವಾಗಬೇಕು. ಈ ಮಾರ್ಗದ ಬೊಮ್ಮಸಂದ್ರದಿಂದ ಹೊಸ ರಸ್ತೆಯವರೆಗೆ ಶೇ. 86ರಷ್ಟು ಕಾಮಗಾರಿ ಮುಗಿದಿದ್ದರೆ, ಹೊಸ ರಸ್ತೆಯಿಂದ ಬೊಮ್ಮನಹಳ್ಳಿ ವರೆಗಿನ ಶೇ.94ರಷ್ಟು ಕೆಲಸ ಪೂರ್ಣಗೊಂಡಿದೆ. ಈ ಎರಡೂ ರೀಚ್‌ನಲ್ಲಿ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಆ ಕೆಲಸ ಕೂಡ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದೆ. ಆದರೆ, ಬೊಮ್ಮನಹಳ್ಳಿಯಿಂದ ಆರ್‌ವಿ ರಸ್ತೆವರೆಗಿನ ಕಾಮಗಾರಿ ಶೇ. 73ರಷ್ಟು ಮಾತ್ರ ಪೂರ್ಣಗೊಂಡಿದ್ದು, ಇದು ಹಳದಿ ಮಾರ್ಗದ ಕೆಲಸದ ವೇಗದ ಹಿನ್ನಡೆಗೆ ಕಾರಣವಾಗಿದೆ. ಈ ಮಾರ್ಗದ ಮಧ್ಯೆ ಜಯದೇವದಲ್ಲಿ ತಲೆ ಎತ್ತುತ್ತಿರುವ ಇಂಟರ್‌ಚೇಂಜ್‌ ಮೆಟ್ರೋ ಸ್ಟೇಷನ್‌ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿ ಕುಠಿತವಾಗಿದೆ. ಮೆಟ್ರೋ 2 ನೇ ಹಂತದ ಯೋಜನೆಯಲ್ಲಿ ಆರ್‌. ವಿ. ರಸ್ತೆ - ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ - ನಾಗವಾರ ಮಾರ್ಗಗಳ (ಗುಲಾಬಿ ಮಾರ್ಗ) ಇಂಟರ್‌ಚೇಂಜ್‌ ನಿಲ್ದಾಣ ಜಯದೇವ ಆಸ್ಪತ್ರೆ ಬಳಿ ನಿರ್ವಣವಾಗುತ್ತಿದೆ. ಜಯದೇವ ಇಂಟರ್‌ ಚೇಂಜ್‌ ಮೆಟ್ರೋ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಲಿದೆ. ಐದನೇ ಹಂತ ನೆಲಮಟ್ಟದಿಂದ 29 ಮೀಟರ್‌ ಎತ್ತರದಲ್ಲಿರಲಿದೆ. ದೇಶದ ಅತಿ ಎತ್ತರದ ಇದು ಎನಿಸಿಕೊಳ್ಳಲಿದೆ. ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಅಂಡರ್‌ಪಾಸ್‌, ನೆಲಮಟ್ಟದಲ್ಲಿ ಸಾಮಾನ್ಯ ವಾಹನಗಳ ಸಂಚಾರ, ಅದರ ಮೇಲೆ ರಾಗಿಗುಡ್ಡ-ಸಿಲ್ಕ್‌ ಬೋರ್ಡ್‌ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಲಿದ್ದು, ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದೆ. ಗುಲಾಬಿ - ಹಳದಿ ಮಾರ್ಗದ ಮಧ್ಯದ ಸ್ಥಳದಲ್ಲಿ ಎಎಫ್‌ಸಿ ಗೇಟ್‌ಗಳು, ಟಿಕೆಟ್‌ ಕೌಂಟರ್‌ ಮತ್ತಿತರ ಕಟ್ಟಡಗಳು ತಲೆ ಎತ್ತಲಿವೆ. ಸಾವಿರ ಕೋಟಿಗೂ ಅಧಿಕ ಮೊತ್ತ ಹಳದಿ ಮಾರ್ಗದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ವರೆಗಿನ ಯೋಜನಾ ವೆಚ್ಚ ಸುಮಾರು 1,308 ಕೋಟಿಯಾಗಿದ್ದು, ಐಟಿಡಿ ಸಿಮೆಂಟೇಶನ್‌ ಇಂಡಿಯಾ ಹಾಗೂ ವೆನಿಂಗ್‌ - ಯುಆರ್‌ಸಿ ಸಂಸ್ಥೆಗಳು ಕಾಮಗಾರಿ ಕೈಗೆತ್ತಿಕೊಂಡಿವೆ. ಐಟಿಡಿ ಸಿಮೆಂಟೇಶನ್‌ ಇಂಡಿಯಾ 11 ನಿಲ್ದಾಣಗಳನ್ನು ಹಾಗೂ ವೆನಿಂಗ್‌ - ಯುಆರ್‌ಸಿ ಆರಂಭದ 6 ನಿಲ್ದಾಣ ಕಾಮಗಾರಿಯನ್ನು ಮಾಡುತ್ತಿವೆ. ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು ಆರ್‌ವಿ ರೋಡ್‌, ರಾಗಿಗುಡ್ಡ ದೇವಾಲಯ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ, ಸಿಲ್ಕ್ ಬೋರ್ಡ್‌, ಎಚ್‌ಎಸ್‌ಆರ್‌ ಬಡಾವಣೆ, ಆಕ್ಸ್‌ಫರ್ಡ್‌ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಾಪುರ ರಸ್ತೆ, ಹೊಸ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ-1, ಎಲೆಕ್ಟ್ರಾನಿಕ್‌ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ. 2022ರ ಆಗಸ್ಟ್‌ನಲ್ಲಿ ಸಂಚಾರಕ್ಕೆ ಮುಕ್ತ ಎಲ್ಲವೂ ಅಂದುಕೊಂಡಂತೆ ನಡೆದರೆ 2022ರ ಆಗಸ್ಟ್‌ನಲ್ಲಿ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಬೇಕು. ಸಕಾಲದಲ್ಲಿ ಕಾಮಗಾರಿ ಮುಗಿಸುವ ಎಲ್ಲಾ ಸಾಧ್ಯತೆ ಇದೆ. ಏಕೆಂದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಮಗಾರಿ ವೇಗ ಹೆಚ್ಚಿಸುವ ಮೂಲಕ ಸಕಾಲದಲ್ಲಿ ಕೆಲಸ ಮುಗಿಸುವಂತೆ ಬಿಎಂಆರ್‌ಸಿಎಲ್‌ ಆಧಿಕಾರಿಗಳಿಗೆ ಸೂಚಿಸಿದ್ದಾರೆ. ಐಟಿ - ಬಿಟಿ ಉದ್ಯೋಗಿಗಳಿಗೆ ಅನುಕೂಲ ನಗರದ ಬಹಳಷ್ಟು ಐಟಿ - ಬಿಟಿ ಕಂಪನಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಲಿದ್ದು, ನಮ್ಮ ಮೆಟ್ರೋಗೆ ಉತ್ತಮ ಆದಾಯ ತಂದುಕೊಡುವ ಮಾರ್ಗ ಕೂಡ ಇದಾಗಲಿದೆ ಎಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಈ ಮಾರ್ಗದಲ್ಲಿ ಸುಮಾರು 3.70 ಲಕ್ಷ ಜನ ಪ್ರತಿ ದಿನ ಪ್ರಯಾಣ ಮಾಡುತ್ತಾರೆ ಎಂದು ಅಂದಾಜಿಸಲಾಗಿದ್ದು, 2031ರ ವೇಳೆಗೆ ಈ ಮಾರ್ಗದಲ್ಲಿ ಪ್ರತಿದಿನ 4.55 ಲಕ್ಷ ಹಾಗೂ 2041ರ ವೇಳೆಗೆ ಪ್ರತಿದಿನ 5.02 ಲಕ್ಷ ಜನ ಮೆಟ್ರೋ ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ.


from India & World News in Kannada | VK Polls https://ift.tt/3miX69U

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...