
ಎಸ್. ಜಿ. ಕುರ್ಯ, ಉಡುಪಿ ಬೆಂಗಳೂರು: ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ (ಎಬಿ ಎಆರ್ ಕೆ) ಯೋಜನೆ ಜಾರಿಯಾದ ಮೂರು ವರ್ಷಗಳಲ್ಲಿ 1.47 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆಯಾಗಿದ್ದು ಕೇವಲ ಶೇ. 20ಪ್ರಗತಿ ಸಾಧನೆಯಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಗರಿಷ್ಠ 5ಲಕ್ಷ ರೂ., ಎಪಿಎಲ್ ಕಾರ್ಡ್‍ದಾರರಿಗೆ ಶೇ. 30(1.50ಲಕ್ಷ ರೂ.) ಉಚಿತ ಆರೋಗ್ಯ ಸೇವೆ ಲಭ್ಯವಿದ್ದು ರಾಜ್ಯದಲ್ಲಿ 7,07,97,358 ಜನಸಂಖ್ಯೆಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಗುರಿಯಿದೆ. ಸಾಮಾನ್ಯ ಮತ್ತು ದ್ವಿತೀಯ ಹಂತದ ಚಿಕಿತ್ಸೆ(294), ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆ(251), ತೃತೀಯ ಹಂತದ ಚಿಕಿತ್ಸೆ(934), ತೀವ್ರ ಮತ್ತು ಅಪಘಾತ(171)ಸಹಿತ ಒಟ್ಟು 1,658 ಚಿಕಿತ್ಸಾ ವೈವಿಧ್ಯವಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಚಿಕಿತ್ಸೆ ನೀಡಲಾಗುತ್ತಿದ್ದು ಟೈ ಅಪ್ ಮಾಡಿಕೊಂಡ 450 ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾತಿಗೆ ಸರಕಾರಿ ಆಸ್ಪತ್ರೆಗಳ ಶಿಫಾರಸಿನ ಅಗತ್ಯವಿದೆ. ಹೊಂದಿದವರು ಸರಕಾರಿ ಆಸ್ಪತ್ರೆಯ ಶಿಫಾರಸ್ಸಿಲ್ಲದೆ ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆವಲ್ಲಿ ಇರುವ ಅಡೆತಡೆ ನಿವಾರಿಸಲು ಸಂಸದರ ಸಹಿತ ಶಾಸಕರು, ವಿಧಾನಪರಿಷತ್ ಸದಸ್ಯರು ಸರಕಾರದ ಮುಂದಿಟ್ಟ ಬೇಡಿಕೆ ಈಡೇರಿಲ್ಲ. ಕಾರ್ಡ್ ಇದ್ದರೂ ಕಾನೂನಿನ ಕೊಕ್ಕೆಯಿಂದಾಗಿ ಸಾವಿರಾರು ಬಡವರು ಉಚಿತ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಕಾರ್ಡ್‍ನಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿರುವ ವ್ಯವಸ್ಥೆಯ ಸದ್ಬಳಕೆ ಜತೆಗೆ ಆದಾಯ ಗಳಿಕೆಯೂ ಸಾಧ್ಯವಾಗುತ್ತಿದೆ. ರಾಜ್ಯದ 10 ಜಿಲ್ಲೆಗಳಷ್ಟೇ ಶೇ. 27ಕ್ಕಿಂತ ಅಧಿಕ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ವಿತರಿಸಿವೆ. ರಾಯಚೂರು ಜಿಲ್ಲೆಯಲ್ಲಿ ಕೇವಲ ಶೇ. 10ಜನರಿಗಷ್ಟೇ ಆಯುಷ್ಮಾನ್ ಕಾರ್ಡ್ ತಲುಪಿದ್ದು 21ಜಿಲ್ಲೆಗಳಲ್ಲಿ ಕಾರ್ಡ್ ನೀಡಿಕೆ ಪ್ರಗತಿ ಶೇ. 27ಕ್ಕಿಂತ ಕಡಿಮೆಯಿದೆ. ಆಯುಷ್ಮಾನ್ ಕಾರ್ಡ್ ಇನ್ನೂ ಪಡೆಯದ ಶೇ. 80ರಷ್ಟು ಜನತೆ ಗ್ರಾಮ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿರುವ ಕಾಮನ್ ಸರ್ವೀಸ್ ಸೆಂಟರ್(ಸಿಎಸ್‍ಸಿ), ಸೇವಾ ಕೇಂದ್ರಗಳು ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಧಾರ್ ಸಹಿತ ದಾಖಲೆ ಸಲ್ಲಿಸಿ ಆಯುಷ್ಮಾನ್ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದು. ಜಿಲ್ಲಾ ಮಟ್ಟದಲ್ಲಿರುವ ಸೇವಾ ಸಿಂಧು ಕೇಂದ್ರವನ್ನು ಸಂಪರ್ಕಿಸಬಹುದು. ಕಾರ್ಡ್ ವಿತರಿಸಿದ ಟಾಪ್ ಟೆನ್ ಜಿಲ್ಲೆಗಳು ಜಿಲ್ಲೆ- ಜನಸಂಖ್ಯೆ(ಕಾರ್ಡ್ ವಿತರಣೆ) ಪ್ರಗತಿ
- ಉಡುಪಿ -13,07,243-(8,37,686) -ಶೇ. 64
- ಕೊಡಗು- 5,60,797-(3,25,635) -ಶೇ. 58
- ಉತ್ತರ ಕನ್ನಡ- 15,16,250-(6,20,715)- ಶೇ. 41
- ಮಂಡ್ಯ -18,51,525-(7,37,434) -ಶೇ. 40
- ಶಿವಮೊಗ್ಗ- 18,64,370-(7,21,356) -ಶೇ. 39
- ದಕ್ಷಿಣ ಕನ್ನಡ- 23,35,183-(8,62,028)- ಶೇ. 37
- ಚಿಕ್ಕಮಗಳೂರು- 11,36,558-(3,90,415) -ಶೇ. 34
- ಹಾಸನ- 18,40,223-(5,98,801) -ಶೇ. 33
- ರಾಮನಗರ- 11,40,574-(3,69,975) -ಶೇ. 32
- ಬೆಂಗಳೂರು ಗ್ರಾ. -11,39,694-(3,04,815) -ಶೇ. 27
from India & World News in Kannada | VK Polls https://ift.tt/3F8V0lx