ಇಂಗ್ಲೆಂಡ್‌ನಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲಬೇಕೆಂದರೆ ಈತ ದ್ರಾವಿಡ್‌ ರೂಪ ತಾಳಬೇಕೆಂದ ಲಕ್ಷ್ಮಣ್‌!

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಗೆಲುವು ಸಾಧಿಸಬೇಕೆಂದರೆ, ಈ ಹಿಂದೆ ರಾಹುಲ್ ದ್ರಾವಿಡ್‌ ಆಡಿದ್ದ ರೀತಿಯಲ್ಲಿಯೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಪ್ರದರ್ಶನ ತೋರಬೇಕು ಎಂದು ಮಾಜಿ ಆಟಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೂನ್‌ ತಿಂಗಳಲ್ಲಿ ನಡೆದಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ತನ್ನ ಬ್ಯಾಟಿಂಗ್‌ ವೈಫಲ್ಯದಿಂದ ಭಾರತ, ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಹಾಗಾಗಿ, ಆಗಸ್ಟ್‌ 4 ರಿಂದ ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗುವ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಬ್ಯಾಟಿಂಗ್‌ ವಿಭಾಗ ಪುಟಿದೇಳುವ ಅಗತ್ಯವಿದೆ. ಇಂಗ್ಲೆಂಡ್‌ ಪರಿಸ್ಥಿತಿಗಳಲ್ಲಿ ಬಳಸುವ ಡ್ಯೂಕ್‌ ಬಾಲ್‌ ಹೆಚ್ಚಿನ ಸ್ವಿಂಗ್‌ ಆಗುವ ಹಿನ್ನೆಲೆಯಲ್ಲಿ ಜೇಮ್ಸ್ ಅಂಡರ್ಸನ್‌ ಹಾಗೂ ಸ್ಟುವರ್ಟ್ ಬ್ರಾಡ್‌ ಅವರಂಥ ವೇಗಿಗಳನ್ನು ಎದುರಿಸುವುದು ಅಷ್ಟೊಂದು ಸುಲಭವಲ್ಲ. ಹಾಗಾಗಿ, ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಇದೀಗ ಬ್ಯಾಟಿಂಗ್‌ನದ್ದೇ ದೊಡ್ಡ ಚಿಂತೆಯಾಗಿದೆ. ಈ ಬಗ್ಗೆ ಮಾತನಾಡಿರುವ ವಿವಿಎಸ್‌ ಲಕ್ಷ್ಮಣ್‌, ಮೂರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಚೇತೇಶ್ವರ್‌ ಪೂಜಾರ ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗ ಮುನ್ನಡೆ ಸಾಧಿಸಲಿದೆ ಎಂದು ಹೇಳಿದ್ದಾರೆ. ಕಳೆದ 2018ರ ಇಂಗ್ಲೆಂಡ್‌ ಪ್ರವಾಸದಲ್ಲಿಯೂ ಪೂಜಾರ, ಶತಕ ಸಿಡಿಸಿದಾಗ ಭಾರತ ಮುನ್ನಡೆ ಪಡೆದಿತ್ತು. ಅದೇ ರೀತಿ ಈ ಬಾರಿಯೂ 3ನೇ ಕ್ರಮಾಂಕದಲ್ಲಿ ಪೂಜಾರ ರನ್‌ ಗಳಿಸಿದರೆ ಖಂಡಿತಾ ತಂಡಕ್ಕೆ ನಿರ್ಣಾಯಕವಾಗಲಿದೆ ಎಂದು ಮಾಜಿ ಆಟಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಆರಂಭಿಕರ ಬಳಿಕ ಬ್ಯಾಟಿಂಗ್‌ ಮೂರನೇ ಕ್ರಮಾಂಕದಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಅರ್ಧ ಶತಕ ಹಾಗೂ ಶತಕಗಳನ್ನು ಸಿಡಿಸಿ ಸಾಕಷ್ಟು ದಿನಗಳು ಕಳೆದಿರುವ ಚೇತೇಶ್ವರ್‌ ಪೂಜಾರ ಫಾರ್ಮ್‌ಗೆ ಮರಳುವ ಕಡೆಗೆ ಈ ಸರಣಿಯಲ್ಲಿ ಗಮನ ಹರಿಸಬಹುದು. ಏಕೆಂದರೆ, ಓಪನಿಂಗ್‌ ಬ್ಯಾಟ್ಸ್‌ಮನ್‌ಗಳ ಜೊತೆಗೆ ಮೂರನೇ ಕ್ರಮಾಂಕ ತಂಡಕ್ಕೆ ತುಂಬಾ ಮುಖ್ಯವಾಗಿದೆ," ಎಂದು ಸ್ಟಾರ್‌ ಸ್ಪೋರ್ಟ್ಸ್ ಚರ್ಚೆಯ ವೇಳೆ ಲಕ್ಷ್ಮಣ್‌ ತಿಳಿಸಿದರು. 2007ರಲ್ಲಿ ಭಾರತ ಕೊನೆಯ ಬಾರಿ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. 2002ರ ಇಂಗ್ಲೆಂಡ್‌ ಪ್ರವಾಸದಲ್ಲಿ ನಾಲ್ಕು ಪಂದ್ಯಗಳಿಂದ 602 ರನ್‌ ಗಳಿಸಿದ್ದರು. 2007ರಲ್ಲಿ ಮೂರು ಟೆಸ್ಟ್‌ ಪಂದ್ಯಗಳಿಂದ 126 ರನ್‌ ಹಾಗೂ 2011ರ ಇಂಗ್ಲೆಂಡ್‌ ಪ್ರವಾಸದಲ್ಲಿ ನಾಲ್ಕು ಪಂದ್ಯಗಳಿಂದ ಮಾಜಿ ನಾಯಕ 461 ರನ್‌ ಗಳಿಸಿದ್ದರು. "2002 ಹಾಗೂ 2007ರ ಇಂಗ್ಲೆಂಡ್‌ ಪ್ರವಾಸದ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಲು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಪ್ರಮುಖ ಕಾರಣವಾಗಿತ್ತು. ಈ ಪ್ರವಾಸಗಳಲ್ಲಿ ರಾಹುಲ್‌ ದ್ರಾವಿಡ್‌ 3ನೇ ಕ್ರಮಾಂಕದಲ್ಲಿ ಮಿಂಚಿದ್ದರು. ಒಮ್ಮೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರೆ ಅವರನ್ನು ಕೆಡವಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ," ಎಂದರು. "ರಾಹುಲ್‌ ದ್ರಾವಿಡ್‌ ಒಂದು ತುದಿಯಲ್ಲಿ ದೀರ್ಘ ಇನಿಂಗ್ಸ್ ಆಡಿದರೆ, ಮತ್ತೊಂದು ತುದಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ವಾಭವಿಕ ಆಟ ಪ್ರದರ್ಶಿಸುತ್ತಿದ್ದರು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಕಲೆ ಹಾಕಲಾಗುತ್ತಿತ್ತು ಹಾಗೂ ಪಂದ್ಯದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದೆವು," ಎಂದು ವಿವಿಎಸ್‌ ಲಕ್ಷ್ಮಣ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3C4vBrE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...