ಬೆಂಗಳೂರು: ನೋಟು ಡಬ್ಲಿಂಗ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಶಿವ, ನಾಗೇಂದ್ರ, ಪ್ರಕಾಶ್ ಮತ್ತು ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ ನಕಲಿ ನೋಟುಗಳು ಮತ್ತು ತಾಮ್ರದ ನಾಣ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನೋಟು ಡಬ್ಲಿಂಗ್ ಮಾಡಿಕೊಡುವ ಸ್ಕೀಂ ನೆಪದಲ್ಲಿ ಅಮಾಯಕರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಫೆ.26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟು ಚಲಾವಣೆ ಮಾಹಿತಿ ಆಧರಿಸಿ ದೊಡ್ಡತೋಗೂರು ಬಳಿ ಸಿಐಡಿ ಅಧಿಕಾರಿಗಳು ಆರೋಪಿಗಳನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನ ಡಿಕ್ಕಿ ತೆಗೆದು ಪರಿಶೀಲಿಸಿದಾಗ ಎರಡು ಮೂಟೆಗಳು ಸಿಕ್ಕಿವೆ. ಅದರಲ್ಲಿ 2 ಸಾವಿರ ರೂ. ಮುಖಬೆಲೆಯ 340 ನಕಲಿ ನೋಟುಗಳು ಸಿಕ್ಕಿವೆ. ಕಟ್ಟಿನ ಮೇಲೆ ಮತ್ತು ಕೆಳಗೆ 2 ಸಾವಿರ ರೂ. ನಕಲಿ ನೋಟುಗಳನ್ನು ಇಡಲಾಗಿತ್ತು. ನಡುವೆ ಅದೇ ಸೈಜಿನ ಬಿಳಿ ಹಾಳೆಗಳನ್ನು ಇರಿಸಲಾಗಿತ್ತು. ಅಲ್ಲದೆ, ಮೂಟೆಯಲ್ಲಿ ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ನೋಟು ಡಬ್ಲಿಂಗ್ ಮಾಡಿಕೊಡುವ ಸ್ಕೀಂ ನೆಪದಲ್ಲಿಅಮಾಯಕರನ್ನು ನಂಬಿಸಿ ಮೋಸ ಮಾಡುವ ಜಾಲ ಇದಾಗಿದೆ. ಈ ಹಿಂದೆಯೂ ಇದೇ ರೀತಿ ವಂಚಕರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
from India & World News in Kannada | VK Polls https://ift.tt/2NZ3MNd