ಉಪ್ಪಿನಂಗಡಿ: ಮನೆಯೊಂದಕ್ಕೆ ರಾತ್ರಿ ಹೊತ್ತು ನುಗ್ಗಿದ ತಂಡ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ ಘಟನೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಇಲ್ಲಿನ ಮುಕುಂದ ಅವರ ಮನೆಗೆ ನುಗ್ಗಿದ ಉಬೇದ್ ಮತ್ತು ಆತನ ಸಹಚರರ ತಂಡ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಮಾಡಿದೆ ಎಂದು ಗಾಯಾಳು ಮುಕುಂದ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾರೆ. ಮುಕುಂದ ತಮ್ಮ ಮೊಬೈಲ್‌ನವ್ಯಾಟ್ಸ್ಯಾಪ್ ಅಯೋಧ್ಯಾ ಶ್ರೀರಾಮ ಮಂದಿರದ ಬಗ್ಗೆ ಸ್ಟೇಟಸ್ ಹಾಕಿದ್ದು, ಇದನ್ನು ಆಕ್ಷೇಪಿಸಿದ ತಂಡ ದಾಳಿ ಮಾಡಿ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ ಹೊತ್ತು ಮನೆಗೆ ದಾಳಿ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪನ್ನು ಚದುರಿಸಿ ದೂರು ದಾಖಲಿಸಿಕೊಂಡಿದ್ದಾರೆ. ರಾತ್ರಿ ವೇಳೆ ಮನೆಗೆ ದಾಳಿ ನಡೆಸಿದ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ್ಪಿನಂಗಡಿ ಎಸ್‌ಐ ಈರಯ್ಯ ಡಿ.ಎನ್. ತಿಳಿಸಿದ್ದಾರೆ. ಮನೆಯ ಮುಂದೆ ಜನ ಜಮಾಯಿಸಿ ಅವಾಚ್ಯ ಪದಗಳಿಂದ ಬೈಯ್ಯುವುದು ಮತ್ತು ಮನೆಯ ಗೇಟನ್ನು ಹಾನಿಗೊಳಿಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
from India & World News in Kannada | VK Polls https://ift.tt/3rlXlCs