ಕಣಿತಹಳ್ಳಿ ಎನ್. ಚಂದ್ರೇಗೌಡ ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಸಂಸ್ಕರಿತ ಹರಿಯುತ್ತಿದೆ. ಇದೀಗ ಜಿಲ್ಲೆಯ ಎಲ್ಲಾ ತಾಲೂಕಿನ ಜನ ನಮಗೂ ನೀರು ಕೊಡಿ ಎಂದು ಹೋರಾಟಕ್ಕೆ ಇಳಿದಿದ್ದಾರೆ. ನಿಗದಿತ ಪ್ರಮಾಣದಲ್ಲಿ ನೀರು ಬಾರದಿದ್ದುದರಿಂದ ಎಚ್‌ಎನ್ () ವ್ಯಾಲಿ ನೀರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಶಾಶ್ವತ ನೀರಾವರಿ ಯೋಜನೆಗಳಿಲ್ಲದ ಚಿಕ್ಕಬಳ್ಳಾಪುರ ಜಿಲ್ಲೆ ನಿರಂತರ ಬರಗಾಲಕ್ಕೆ ತುತ್ತಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿ ಹೋಗಿ, ಕೃಷಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಲೇ ಇದೆ. ಇಂತಹ ಸ್ಥಿತಿಯಲ್ಲಿರುವ ಜಿಲ್ಲೆಯ ಜನತೆ ಪಾಲಿಗೆ ಯೋಜನೆ ಆಶಾದಾಯಕವಾಗಿತ್ತು. ಆದರೆ ಈ ಯೋಜನೆ ಜಾರಿಗೂ ಮುನ್ನವೇ ವಿವಾದವಾಗಿತ್ತು. ಜಿಲ್ಲೆಗೆ ವಿಷಪೂರಿತ ಬೆಂಗಳೂರಿನ ಕೊಳಚೆ ನೀರನ್ನು ಬಿಡಬೇಡಿ ಎಂಬ ಹೋರಾಟ ನಡೆದಿತ್ತು. ಜಿಲ್ಲೆಯ ಜನರಿಗೆ ವಿಷವುಣಿಸಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈಗ ಚಿತ್ರಣವೇ ಬದಲಾಗಿದೆ. 2 ಹಂತದಲ್ಲಿ ಸಂಸ್ಕರಿತ ನೀರಿನಿಂದ ಸಾಕಷ್ಟು ಕೆರೆಗಳು ತುಂಬಿಕೊಂಡಿವೆ. ಜಿಲ್ಲೆಯ 44 ಕೆರೆಗಳ ಪೈಕಿ 12ಕ್ಕೂ ಹೆಚ್ಚು ಕೆರೆಗಳಿಗೆ ಎಚ್‌ಎನ್ ವ್ಯಾಲಿ ನೀರು ಹರಿದು ತುಂಬಿವೆ. ಹಲವು ತಾಲೂಕುಗಳ ಜನ ನಮ್ಮ ಕೆರೆಗಳಿಗೆ ನೀರು ಬಿಡೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಸಂಸ್ಕರಿತ ನೀರಿನಿಂದಿಲ್ಲ ತೊಂದರೆ ಕಂದವಾರ ಕೆರೆ, ಗೋಪಾಲಕೃಷ್ಣ ಅಮಾನಿಕೆರೆ, ಪೆರೇಸಂದ್ರ ಕೆರೆ, ದಿಬ್ಬೂರು ಕೆರೆ ಹೀಗೆ ಸಾಕಷ್ಟು ಕೆರೆಗಳಿಗೆ ನೀರು ಹರಿದಿದೆ. ಕೆಲವು ಕೆರೆಗಳಲ್ಲಿ ಮೀನುಗಾರಿಕೆ ಕೂಡಾ ನಡೆಯುತ್ತಿದೆ. ಮೀನುಗಳು ಮೊದಲೇ ಸೂಕ್ಷ್ಮ. ಆದರೆ ಮೀನುಗಾರಿಕೆಯೂ ಈ ಕೆರೆಗಳಲ್ಲಿ ನಡೆಯುತ್ತಿದ್ದು, ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಎಚ್ ಎನ್ ವ್ಯಾಲಿ ನೀರಿನ ಬಗ್ಗೆ ಮೊದಲಿದ್ದ ಆತಂಕ ದೂರವಾದಂತೆ ಕಾಣುತ್ತಿದೆ. ನೀರಿಗೇಕೆ ಡಿಮ್ಯಾಂಡ್? ಬೆಂಗಳೂರಿನ ಕೊಳಚೆ ನೀರನ್ನು ಜಿಲ್ಲೆಗೆ ಸರಿಯಾಗಿ ಸಂಸ್ಕರಿಸದೆ ಹರಿಸುತ್ತಾರೆ. ಇದರಿಂದ ಜನರಿಗೆ ಸರಕಾರ ವಿಷವುಣಿಸಲು ಹೊರಟಿದೆ ಎಂದೇ ಆರೋಪಿಸಲಾಗಿತ್ತು. ಆದರೆ ಈಗ ಹಲವು ಕೆರೆಗಳು ತುಂಬಿಕೊಳ್ಳುತ್ತಿದಂತೆ ಕೆರೆಯ ಸುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರು ಬರಲಾರಂಭಿಸಿದೆ. ಅಂತರ್ಜಲದ ಮಟ್ಟ ಏರಿಕೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳಿವೆ. ಮೀನು ಸಾಕಾಣಿಕೆಯನ್ನು ಹಲವರು ಆರಂಭಿಸಿದ್ದಾರೆ. ಸುಧಾಕರ್‌ರಿಂದ ಭಗೀರಥ ಪ್ರಯತ್ನ ಇನ್ನೊಂದೆಡೆ ಯೋಜನೆ ಸಿದ್ದರಾಮಯ್ಯ ಅವರ ಕಾಲದಲ್ಲೇ ಜಾರಿಯಾಗಿದ್ದರೂ ಅಂದು ಶಾಸಕರಾಗಿದ್ದ ಸುಧಾಕರ್ ಅವರ ಆಸಕ್ತಿ ಹೆಚ್ಚಿತ್ತು. ಸುಧಾಕರ್ ಸಚಿವರಾದ ನಂತರ ಕುಂಟುತ್ತ ಸಾಗಿದ್ದ ಯೋಜನೆಗೆ ಚುರುಕುಗೊಳಿಸಿದ್ದಾರೆ. ಡಾ. ಸುಧಾಕರ್ ಇಲ್ಲದಿದ್ದರೆ ಬೆಂಗಳೂರಿನಿಂದ ಬರುವಾಗಲೇ ನೀರು ಬೇರೆಡೆ ಹರಿಯುತ್ತಿತ್ತು ಎನ್ನುವ ವಾದವೂ ಇದೆ. ಬಿಜೆಪಿ ಸರಕಾರದಲ್ಲಿ ಸುಧಾಕರ್ ಸಚಿವರಾದ ದಿನವೇ ಕಂದವಾರ ಕೆರೆಗೆ ಎಚ್ ಎನ್ ವ್ಯಾಲಿ ನೀರು ಹರಿದಿತ್ತು. ಆದರೆ ಆನಂತರ ಕಿಡಿಗೇಡಿಗಳು ವಿದ್ಯುತ್ ವೈರ್‌ಗಳನ್ನು ಸುಟ್ಟು ಹಾಕುವುದು ಸೇರಿದಂತೆ ಹಲವು ಅಡೆತಡೆಗಳು ಎದುರಾದರೂ ಈ ಸಂಬಂಧ ಸಚಿವರು ಖಡಕ್ ಎಚ್ಚರಿಕೆ ಕೊಟ್ಟು ಅದನ್ನು ಸರಿಪಡಿಸಿ ನೀರು ಹರಿಯುವಂತೆ ಮಾಡಿದ್ದರು ಎನ್ನುವುದು ಸುಧಾಕರ್ ಬೆಂಬಲಿಗರ ಮಾತು. ಈ ಎರಡೂ ಪಕ್ಷಗಳ ನಡುವೆ ರೈತ ಸಂಘದವರು, ತಮ್ಮ ನಿರಂತರ ಹೋರಾಟಕ್ಕೆ ಮಣಿದು ರಾಜ್ಯ ಸರಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎನ್ನುತ್ತಿದ್ದಾರೆ.
from India & World News in Kannada | VK Polls https://ift.tt/3bW4Zg7