ಹೊಸದಿಲ್ಲಿ: ಚೀನಾ ಸರಕಾರ ಪೋಷಿತ ಹ್ಯಾಕರ್‌ಗಳ ಜಾಲದಲ್ಲಿ ಭಾರತೀಯ ಬಂದರುಗಳ ಮಾಹಿತಿಯನ್ನು ಗೌಪ್ಯವಾಗಿ ಕಲೆಹಾಕುತ್ತಿರುವ ಕನಿಷ್ಠ ಒಂದಾದರೂ ಕಳ್ಳಗಣ್ಣು ಇನ್ನೂ ಸಕ್ರಿಯವಾಗಿದೆ ಎಂದು ಅಮೆರಿಕ ಮೂಲದ ರೆಕಾರ್ಡೆಡ್ ಫ್ಯೂಚರ್ ಕಂಪನಿ ಎಚ್ಚರಿಸಿದೆ. ಕ್ಷೇತ್ರಗಳ ಮೇಲೆ ಚೀನಾ ಹ್ಯಾಕರ್ಸ್‌ಗಳ ಕಣ್ಣು ಬಿದ್ದಿರುವ ಬಗ್ಗೆ ಮಾಹಿತಿ ಬಹಿರಂಗವಾದ ಕೂಡಲೇ ಎಚ್ಚೆತ್ತ ಸರಕಾರಿ ಅಧಿಕಾರಿಗಳು ನಿರೋಧಕ ಜಾಲವನ್ನು ರಚಿಸಿದ್ದಾರೆ. ವಿದೇಶಗಳಿಂದ ಯಾವುದೇ ಸಂಪರ್ಕ ದೇಶದ ಎಲೆಕ್ಟ್ರಾನಿಕ್ಸ್ ವಲಯದೊಳಗೆ ನುಸುಳದಂತೆ ಭಾರಿ ಜಾಗರೂಕತೆ ವಹಿಸಲಾಗುತ್ತಿದೆ. ಆದಾಗ್ಯೂ ರೆಡ್‌ಎಕೋ ಹೆಸರಿನ ಚೀನಾ ಹ್ಯಾಕರ್ಸ್ ಹಳೆಯ ಜಾಲದ ಸಂಪರ್ಕವೊಂದು ಈಗಲೂ ಗೌಪ್ಯ ಮಾಹಿತಿಯನ್ನು ರವಾನಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿ ಸ್ಟುವರ್ಟ್ ಸುಲೊಮನ್ ಹೇಳಿದ್ದಾರೆ. ಚೀನಾದಲ್ಲಿರುವ ಕಂಪನಿಯೊಂದಿಗೆ ಭಾರತದ ಬಂದರು ಜಾಲ ಸಂಪರ್ಕ ಮುಂದುವರಿಸಿರುವುದನ್ನು ನಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಮಾಡಿದ್ದೇವೆ. ಭಾರತದ ಒಟ್ಟು 10 ಗ್ರಿಡ್‌ಗಳು ಮತ್ತು ಎರಡು ಬಂದರುಗಳ ಮಾಹಿತಿ ಹಂಚಿಕೆ ಜಾಲವನ್ನು ನಾವು ಪರಿಶೀಲಿಸಿದಾಗ, ಫೆ.28ರಂದು ಕೂಡ ಚೀನಾಗೆ ಮಾಹಿತಿ ರವಾನೆಯಾಗಿರುವುದು ದೃಢಪಟ್ಟಿದೆ ಎಂದು ಸುಲೊಮನ್ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಮಧ್ಯದಿಂದಲೂ ಚೀನಾ ಹ್ಯಾಕರ್‌ಗಳು ಭಾರತದ ವಿದ್ಯುತ್ ಹಾಗೂ ಮಾಹಿತಿ ಹಂಚಿಕೆ ಜಾಲದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ. ತೆಲಂಗಾಣ ವಿದ್ಯುತ್ ವಲಯಕ್ಕೆ ಆಪತ್ತು! ತೆಲಂಗಾಣದ 40 ವಿದ್ಯುತ್ ಸಬ್ ಸ್ಟೇಷನ್‌ಗಳಿಗೂ ಚೀನಾ ಹ್ಯಾಕರ್‌ಗಳಿಂದ ಆಪತ್ತು ಎದುರಾಗಿದೆ. ಈ ಉಪ ಕೇಂದ್ರಗಳ ನೆಟ್‌ವರ್ಕ್ ವ್ಯವಸ್ಥೆ ಒಳಗೆ ಚೀನಾದ ಮಾಲ್‌ವೇರ್ ಪ್ರವೇಶಿಸಿವೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ ಎಚ್ಚರಿಸಿದೆ. ''ಈ ಬಗ್ಗೆ ನಿಗಾ ಇರಿಸಲಾಗಿದೆ. ಅಂತಹ ಸಂಭಾವ್ಯ ಅಪಾಯ ಎದುರಿಸಲು ರಾಜ್ಯ ವಿದ್ಯುತ್ ಪ್ರಸರಣಾ ನಿಗಮ ಸಜ್ಜಾಗಿದೆ.ಈಗಾಗಲೇ ನೆಟ್‌ವರ್ಕ್ ವ್ಯವಸ್ಥೆಯನ್ನು ಜಾಲಾಡಿ ವಿದೇಶಿ ಮಾಲ್‌ವೇರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಮುಂಬಯಿ ರೀತಿ ನಮ್ಮಲ್ಲಿ ಹಠಾತ್ ಪವರ್ ಕಟ್ ಆಗುವುದಿಲ್ಲ,'' ಎಂದು ತೆಲಂಗಾಣ ವಿದ್ಯುತ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದಿಂದ ನಕಾರ! ಸೂಕ್ತ ದಾಖಲೆಗಳು ಇಲ್ಲದೆಯೇ ನಮ್ಮ ವಿರುದ್ಧ ಹ್ಯಾಕಿಂಗ್ ಆರೋಪ ಹೊರಿಸಿರುವುದು ಖಂಡನಾರ್ಹ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ.
from India & World News in Kannada | VK Polls https://ift.tt/3bWaOKI