‘ರಾಜಕೀಯ ಸಂಪ್ರದಾಯ’ಗಳೇ ಮುಂದುವರೆದಿದೆ.. ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.. ಮುಂದೆ ಈ ಪ್ರಕರಣದ ತನಿಖೆ ಯಾರಿಗೆ ವಹಿಸುತ್ತಾರೆ..? ಸಂತ್ರಸ್ತ ಯುವತಿ ಏನೆಂದು ಹೇಳಿಕೆ ಕೊಡ್ತಾರೆ..? ವಿಡಿಯೋ, ಆಡಿಯೋಗಳ ಸತ್ಯಾಸತ್ಯತೆ ಕಥೆ ಏನು..? ಇವೆಲ್ಲದರ ಆಧಾರದ ಮೇಲೆ ತನಿಖೆಯ ಭವಿಷ್ಯ ನಿರ್ಧಾರವಾಗುತ್ತೆ..
ಕರ್ನಾಟಕ ರಾಜಕೀಯಕ್ಕೂ, ಲೈಂಗಿಕ ಹಗರಣಗಳಿಗೂ ಬಿಡದ ನಂಟು..! ಅದು ಬಿಜೆಪಿ ಸರ್ಕಾರವಿರಲಿ, ಕಾಂಗ್ರೆಸ್ ಸರ್ಕಾರವಿರಲಿ.. ಎಲ್ಲರಿಗೂ ಇದರ ಬಿಸಿ ಸಖತ್ತಾಗೇ ತಟ್ಟಿದೆ..! ಆದ್ರೆ, ಬಿಜೆಪಿ ಪಾಲು ಇದರಲ್ಲಿ ಕೊಂಚ ಹೆಚ್ಚೇ ಎನ್ನಬಹುದು..! ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ರೇಣುಕಾಚಾರ್ಯ ಹಾಗೂ ಹರತಾಳು ಹಾಲಪ್ಪ ಕೊಟ್ಟ ಏಟುಗಳನ್ನು ಮರೆಯುವ ಮುನ್ನವೇ, ಇದೀಗ ಇಂಥದ್ದೇ ಮತ್ತೊಂದು ಕೇಸ್ ಬಯಲಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪ, ಮೊದಲ ಎರಡು ಕೇಸ್‌ಗಳಿಗಿಂತಲೂ ಹೆಚ್ಚಿನ ತೀವ್ರತೆ ಹೊಂದಿದೆ ಎಂದರೂ ತಪ್ಪಾಗಲಾರದು..! ಏಕೆಂದರೆ ಇಲ್ಲಿ ಆಡಿಯೋ, ವಿಡಿಯೋ ಸಾಕ್ಷ್ಯಗಳಿವೆ.. ‘ಮೇಟಿ’ ಕೇಸ್‌ಗಿಂತಲೂ ಇಲ್ಲಿ ಸಾಕ್ಷ್ಯಾಧಾರಗಳು ಧಾರಾಳವಾಗಿ ಕಾಣತೊಡಗಿವೆ..!
ಹಾಗೆ ನೋಡಿದ್ರೆ, ಲೈಂಗಿಕ ಹಗರಣಗಳು ಬಯಲಾದ ಬೆನ್ನಲ್ಲೇ, ‘ಕಳಂಕಿತ’ರ ರಾಜೀನಾಮೆ ಕೇಳೋದು, ಅವರು ರಾಜೀನಾಮೆ ಕೊಡೋದು, ರಾಜಕೀಯವಾಗಿ ಹಿನ್ನೆಲೆಗೆ ಸರಿಯೋದು.. ಇವೆಲ್ಲ ಪ್ರಕ್ರಿಯೆಗಳೂ ‘ರಾಜಕೀಯ ಸಂಪ್ರದಾಯ’ ಎಂಬಂತೆ ನಡೆದು ಬರ್ತಿದೆ. ಈ ಹಿಂದಿನ ಲೈಂಗಿಕ ಕಿರುಕುಳ ಕೇಸ್‌ಗಳ ಸ್ಥಿತಿಗತಿಯನ್ನು ಗಮನಿಸಿದ್ರೆ, ಈ ಅಂಶ ದೃಢಪಡುತ್ತೆ..!
ಬಿಎಸ್‌ವೈ ಸರ್ಕಾರಕ್ಕೆ ಮೊದಲ ಏಟು ಕೊಟ್ಟಿದ್ದ ರೇಣುಕಾಚಾರ್ಯ..!
ಹೊನ್ನಾಳಿ ಶಾಸಕ, ಮಾಜಿ ಸಚಿವ ರೇಣುಕಾಚಾರ್ಯ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಿಂದಲೇ ಜನಜನಿತ..! ನರ್ಸ್ ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಪ್ರಕರಣ, ಬಿಎಸ್‌ವೈ ಸರ್ಕಾರದ ಮೊದಲ ಅವಧಿಯ ಬಹು ಚರ್ಚಿತ ಹಗರಣ..! ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿಗೆ ಮುತ್ತು ಕೊಟ್ಟ ಫೋಟೋ ಮಾಧ್ಯಮಗಳಲ್ಲಿ ಹರಿದಾಡಿದ್ದೇ ತಡ, ಭಾರೀ ಸಂಚಲನವೇ ಸೃಷ್ಟಿಯಾಗಿತ್ತು. ನರ್ಸ್ ಜಯಲಕ್ಷ್ಮಿ ಅವರು ಲೈಮ್‌ಲೈಟ್‌ಗೆ ಬಂದರು.. ರೇಣುಕಾಚಾರ್ಯ ತಲೆದಂಡಕ್ಕೂ ಹೋರಾಟಗಳು ನಡೆದವು.
ಈ ಪ್ರಕರಣ ಕೊನೆಗೊಂಡಿದ್ದು ಕೋರ್ಟ್‌ನಲ್ಲಿ. ರಾಜೀ ಸಂಧಾನದ ಮೂಲಕ ಪ್ರಕರಣ ಕೊನೆಗೊಂಡ ಬಳಿಕವೂ, ಜೀವ ಬೆದರಿಕೆಯ ಆರೋಪವೂ ರೇಣುಕಾಚಾರ್ಯ ಹೆಗಲೇರಿತ್ತು. ಈ ವೇಳೆ ಸ್ವಾಮೀಜಿಯೊಬ್ಬರ ಸಂಧಾನದ ಬಳಿಕ, ರೇಣುಕಾಚಾರ್ಯ ಹಾಗೂ ಜಯಲಕ್ಷ್ಮಿ ರಾಜಿಯಾದರು ಎನ್ನುತ್ತವೆ ಸುದ್ದಿ ಮೂಲಗಳು..! ಒಟ್ಟಿನಲ್ಲಿ ಈ ಪ್ರಕರಣ ರಾಜ್ಯ ಮಾತ್ರವಲ್ಲ ದೇಶಾದ್ಯಂತ ರಂಗು ರಂಗಾಗಿ, ದೊಡ್ಡ ಮಟ್ಟದಲ್ಲಿ ಚರ್ಚೆಯಾದರೂ ಕೂಡಾ, ಕೋರ್ಟ್ ಕಟಕಟೆಯಲ್ಲಿ ರಾಜಿಯ ಹಾದಿ ಹಿಡಿದು ಕೊನೆಗೊಂಡಿತು.
ಬಿಎಸ್‌ವೈ ಸರ್ಕಾರಕ್ಕೆ ಮತ್ತೊಂದು ಶಾಕ್ ಹಾಲಪ್ಪ..!
ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ವೇಳೆ ರೇಣುಕಾಚಾರ್ಯ ಪ್ರಕರಣವನ್ನು ಎದುರಿಸಿ ಅದನ್ನು ಮರೆಯುವ ಮುನ್ನವೇ ಮತ್ತೊಂದು ಆಘಾತ ಅನುಭವಿಸಿದ್ದರು..! ತಮ್ಮ ಸ್ವಂತ ಜಿಲ್ಲೆಯ ಶಾಸಕ, ಸಚಿವ ಹರತಾಳು ಹಾಲಪ್ಪ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. 2009ರ ನವೆಂಬರ್ 26ರಂದು ತಮ್ಮ ಪತ್ನಿ ಮೇಲೆ ಅತ್ಯಾಚಾರ ನಡೆದಿರೋದಾಗಿ 2010ರ ಮೇನಲ್ಲಿ ವೆಂಕಟೇಶ್ ಎಂಬಾತ ದೂರು ದಾಖಲಿಸಿದ್ದ. ಸಚಿವರು ತಮ್ಮ ಸ್ನೇಹಿತರಾಗಿದ್ದರು, ಮನೆಗೆ ಊಟಕ್ಕೆ ಕರೆದಿದ್ದ ವೇಳೆ ನನ್ನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವೆಂಕಟೇಶ್ ಆರೋಪಿಸಿದ್ದರು.
ಆ ಪ್ರಕರಣ ಹೊರಬಿದ್ದ ವೇಳೆ ಯಾವುದೇ ವಿಡಿಯೋ, ಫೋಟೋ ಸಾಕ್ಷ್ಯ ಇರಲಿಲ್ಲ. ಆದ್ರೆ. ವೆಂಕಟೇಶ್ ದೂರಿನ ಆಧಾರದ ಮೇಲೆ ಸಚಿವರ ಹೆಸರನ್ನು ಪ್ರಕಟಿಸದೆ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಇದೇ ವರದಿಗಳ ಆಧಾರದ ಮೇಲೆ, ವೆಂಕಟೇಶ್ ಅವರ ದೂರಿನ ಆಧಾರದ ಮೇಲೆ ಹರತಾಳು ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸತತ 7 ವರ್ಷಗಳ ಕಾನೂನು ಬಳಿಕ ನ್ಯಾಯಾಲಯ ಹಾಲಪ್ಪ ಅವರನ್ನು ಖುಲಾಸೆಗೊಳಿಸಿತು. ಈ ಪ್ರಕರಣ ನಡೆಯದಿದ್ದರೆ ಹಾಲಪ್ಪ ರಾಜಕೀಯವಾಗಿ ಮುನ್ನೆಲೆಯಲ್ಲಿ ಇರುತ್ತಿದ್ದರೇನೋ.. ಆದ್ರೆ, ಅವರು ತೆರೆಮರೆಗೆ ಸರಿಯಲು ಈ ಪ್ರಕರಣವೇ ಮುಖ್ಯ ಕಾರಣವಾಗಿ ಹೋಯ್ತು..
ಸಿದ್ದು ಸರ್ಕಾರಕ್ಕೆ ಗುದ್ದು ಕೊಟ್ಟ ಮೇಟಿ ಮೀಟಿಂಗ್..!
ಯಡಿಯೂರಪ್ಪ ಸರ್ಕಾರದ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಾದಾಗ ಹರಿಹಾಯ್ದಿದ್ದ ಕಾಂಗ್ರೆಸ್ ಪಕ್ಷ, ತನ್ನ ಅವಧಿಯಲ್ಲೂ ಇದೇ ರೀತಿಯ ಮುಜುಗರ ಅನುಭವಿಸಬೇಕಾಯ್ತು. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್. ವೈ ಮೇಟಿ ಅವರು ಮಹಿಳೆಯೊಬ್ಬರಿಗೆ ಕೆಲಸ ಕೊಡಿಸೋದಾಗಿ ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿಡಿಯೋ ಸಮೇತ ಹಗರಣ ಸ್ಫೋಟವಾಗಿತ್ತು..! ಈ ವಿಡಿಯೋ ಬಯಲಾಗಿದ್ದೇ ತಡ, ಸಚಿವ ಸ್ಥಾನಕ್ಕೆ ಮೇಟಿ ರಾಜೀನಾಮೆ ನೀಡಬೇಕಾಯ್ತು.
ಆದ್ರೆ, ಈ ಪ್ರಕರಣ ಸಂತ್ರಸ್ಥೆ ಎನ್ನಲಾದ ಮಹಿಳೆ ಕೆಲವೇ ದಿನಗಳಲ್ಲಿ ಉಲ್ಟಾ ಹೊಡೆದಿದ್ದರು, ತಮ್ಮ ಮೇಲೆ ದೌರ್ಜನ್ಯ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಪ್ರಕರಣದ ಸಿಐಡಿ ತನಿಖೆ ಕೂಡಾ ನಡೆಯಿತು. ಆದ್ರೆ, ಮೇಟಿ ಅವರ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದ ವಿಡಿಯೋವನ್ನು ಎಲ್ಲಿ, ಯಾವಾಗ ಚಿತ್ರೀಕರಣ ಮಾಡಲಾಗಿತ್ತು, ಯಾವ ಸಾಧನದಿಂದ ಚಿತ್ರೀಕರಣ ಮಾಡಲಾಗಿತ್ತು ಅನ್ನೋದಕ್ಕೆ ಸಾಕ್ಷ್ಯ ಸಿಗಲಿಲ್ಲ. ಈ ವಿಡಿಯೋದಲ್ಲಿ ಇರೋದು ಮೇಟಿಯವರೇನಾ ಅನ್ನೋದಕ್ಕೂ ಸ್ಪಷ್ಟ ಪುರಾವೆ ಸಿಗಲಿಲ್ಲ. ಹೀಗಾಗಿ, ಸಾಕ್ಷ್ಯಾಧಾರಗಳ ಕೊರತೆ, ಸಂತ್ರಸ್ಥೆಯ ನಿರಾಕರಣೆ ಹಿನ್ನೆಲೆಯಲ್ಲಿ ಮೇಟಿಯವರಿಗೆ ಸಿಐಡಿ ಕ್ಲೀನ್ ಚಿಟ್ ನೀಡಿತು. ಆದ್ರೆ, ರಾಜಕೀಯವಾಗಿ ಅದಾಗಲೇ ಮೇಟಿ ತೆರೆಮರೆಗೆ ಸರಿದಿದ್ದರು.
ರಮೇಶ್ ಜಾರಕಿಹೊಳಿ ಕೇಸ್ ಏನಾಗಬಹುದು..?
ಸದ್ಯ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಆರೋಪದ ಸಾರಾಂಶ. ಸಂತ್ರಸ್ತ ಯುವತಿ ಜೊತೆಗೆ ರಮೇಶ್ ಜಾರಕಿಹೊಳಿ ನಡೆಸಿದ್ದಾರೆ ಎನ್ನಲಾದ ಮೊಬೈಲ್ ಮಾತುಕತೆ, ವಿಡಿಯೋ ಕಾಲ್ ಸಂಭಾಷಣೆಯ ವಿಡಿಯೋಗಳ ಜೊತೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೋ ಕೂಡಾ ಬಯಲಾಗಿದೆ. ಈ ಎಲ್ಲಾ ವಿಡಿಯೋ ಹಾಗೂ ಆಡಿಯೋಗಳ ಸತ್ಯಾಸತ್ಯತೆಯ ಪರಿಶೀಲನೆ ಮೊದಲು ನಡೆಯಲಿದೆ.
ಈ ಪ್ರಕರಣ ಸಂಬಂಧ ಜಲಸಂಪನ್ಮೂಲ ಸಚಿವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ರೆ, ಸಚಿವರು ತಮ್ಮ ವಿರುದ್ಧದ ಆರೋಪ ನಿರಾಕರಿಸುತ್ತಿದ್ದಾರೆ. 'ಸಂಪ್ರದಾಯ'ದಂತೆ ಪ್ರತಿಪಕ್ಷಗಳು ಸಚಿವರ ರಾಜೀನಾಮೆಗೆ ಆಗ್ರಹಿಸಿದವು, ಬಿಜೆಪಿಯ ಕೆಲವರು ಜಾರಕಿಹೊಳಿ ಪರ ನಿಂತರೆ, ಕೆಲವರು ಶಿಸ್ತು ಕ್ರಮದ ಮಾತನ್ನಾಡಿದರು. ಕೊನೆಗೆ ‘ರಾಜಕೀಯ ಸಂಪ್ರದಾಯ’ವೇ ಮೇಲುಗೈ ಸಾಧಿಸಿದೆ. ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಮುಂದೆ ಈ ಪ್ರಕರಣದ ತನಿಖೆ ಯಾರಿಗೆ ವಹಿಸುತ್ತಾರೆ..? ಸಂತ್ರಸ್ತ ಯುವತಿ ಏನೆಂದು ಹೇಳಿಕೆ ಕೊಡ್ತಾರೆ..? ವಿಡಿಯೋ, ಆಡಿಯೋಗಳ ಸತ್ಯಾಸತ್ಯತೆ ಕಥೆ ಏನು..? ಇವೆಲ್ಲದರ ಆಧಾರದ ಮೇಲೆ ತನಿಖೆಯ ಭವಿಷ್ಯ ನಿರ್ಧಾರವಾಗುತ್ತೆ.. ಆದ್ರೆ, ಈ ಹಿಂದಿನ ಪ್ರಕರಣಗಳ ರೀತಿ ‘ರಾಜಕೀಯ ಸಂಪ್ರದಾಯ’ವೇ ಕಟ್ಟುನಿಟ್ಟಾಗಿ ಪಾಲನೆಯಾದರೆ ಜಾರಕಿಹೊಳಿ ರಾಜಕೀಯವಾಗಿ ತೆರೆಮರೆಗೆ ಸರಿಯೋದು ಮಾತ್ರ ಸತ್ಯ..!
from India & World News in Kannada | VK Polls https://ift.tt/3qb5f02