ನವದೆಹಲಿ: ನಾಯಕಿ ಅವರಿಗೆ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ನೀಡಿರುವ ಆದೇಶವನ್ನು, ಕಾಂಗ್ರೆಸ್ ದ್ವೇಷದ ರಾಜಕಾರಣ ಎಂದು ಬಣ್ಣಿಸಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಒಂದು ತಿಂಗಳೊಳಗಾಗಿ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಎಸ್‌ಪಿಜಿ ಭದ್ರತೆ ಹಿಂಪಡೆದ ಮೇಲೆ ಗಣ್ಯರಿಗೆ ಸರ್ಕಾರಿ ಬಂಗಲೆಯಲ್ಲಿ ಇರುವ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಲೋಧಿ ಎಸ್ಟೇಟ್‌ನಲ್ಲಿರುವ ಟೈಪ್ 6ಬಿ, ಮನೆ ನಂ. 35ರ ವಸತಿ ಸೌಲಭ್ಯವನ್ನು ತೊರೆಯುವಂತೆ ಪ್ರಿಯಾಂಕಾ ಗಾಂಧಿ ಅವರನ್ನು ಕೋರಲಾಗಿದೆ. ಇನ್ನು ಕೇಂದ್ರ ಸರ್ಕಾರದ ಈ ಆದೇಶದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಮೋದಿ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಕಿಡಿಕಾರಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷಗಳ ನಾಯಕರ ವಿರುದ್ಧ ಮೋದಿ ಸರ್ಕಾರದ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. ಪ್ರಿಯಾಂಕಾ ಗಾಂಧಿ ಅವರಿಗೆ ಸರ್ಕಾರಿ ಬಂಗಲೆ ತೊರೆಯಲು ಹೇಳಿರುವುದು ಮೋದಿ ಸರ್ಕಾರದ ಕೀಳು ರಾಜಕೀಯಕ್ಕೆ ಉದಾಹರಣೆ ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ರಾಜಕೀಯದಲ್ಲಿ ಮಿಂಚುತ್ತಿರುವುದನ್ನು ಸಹಿಸದ ಕೇಂದ್ರ ಸರ್ಕಾರ, ಸರ್ಕಾರಿ ಬಂಗಲೆ ತೊರೆಯುವಂತೆ ಹೇಳುವ ಮೂಲಕ ದ್ವೇಷ ಕಾರುತ್ತಿದೆ ಎಂದು ಸುರ್ಜೆವಾಲಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
from India & World News in Kannada | VK Polls https://ift.tt/2VFaLLI