ಕೊಪ್ಪಳ : ಕಾರಟಗಿಯ ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸಿದ್ದ ಕೋವಿಡ್ -19 ಸೋಂಕಿತ ವಿದ್ಯಾರ್ಥಿನಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ವಿದ್ಯಾರ್ಥಿಗಳು ಹಾಗೂ ನಾಲ್ವರು ಪರೀಕ್ಷಾ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಯ ವರದಿ ನೆಗಟಿವ್ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿ ಬುಧವಾರ ಕಾರಟಗಿಯ ಖಾಸಗಿ ಶಾಲೆಗೆ ಆಗಮಿಸಿದ್ದಳು. ಪರೀಕ್ಷೆಗೆ ಬಂದ ವೇಳೆಯಲ್ಲೇ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ತಕ್ಷಣ ವಿದ್ಯಾರ್ಥಿನಿಯನ್ನು ರಾಯಚೂರು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಪರೀಕ್ಷಾ ಕೊಠಡಿಯ 17 ವಿದ್ಯಾರ್ಥಿಗಳು ಹಾಗೂ ನಾಲ್ವರು ಪರೀಕ್ಷಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಅವರೆಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಸದ್ಯ ಲ್ಯಾಬ್ ರಿಪೋರ್ಟ್ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಯ ವರದಿ ನೆಗಟಿವ್ ಬಂದಿದೆ ಎಂದು ಜಿಲ್ಲಾಡಳಿತ ಮೂಲ ತಿಳಿಸಿವೆ. ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ರೋಗದ ನಿಯಂತ್ರಣಕ್ಕೆ ಸರ್ಕಾರ ಇನ್ನಿಲ್ಲದ ಪ್ರಯತ್ನ ಪಡುತ್ತಿದೆ.
from India & World News in Kannada | VK Polls https://ift.tt/2ZxQCIC