ತೆಂಡೂಲ್ಕರ್‌ಗಿಂತಲೂ ವಿರಾಟ್‌ ಕೊಹ್ಲಿ ಬೆಸ್ಟ್‌ ಎಂದ ಎಬಿ ಡಿ'ವಿಲಿಯರ್ಸ್‌!

ಹೊಸದಿಲ್ಲಿ: ಗುರಿ ಬೆನ್ನತ್ತಿ ತಂಡಕ್ಕೆ ಜಯ ತಂದುಕೊಡುವುದರಲ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜ ಸಚಿನ್‌ ತೆಂಡೂಲ್ಕರ್‌ಗಿಂತಲೂ ಟೀಮ್ ಇಂಡಿಯಾ ಕ್ಯಾಪ್ಟನ್ ಬೆಸ್ಟ್‌ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹೇಳಿದ್ದಾರೆ. "ನಮ್ಮಿಬ್ಬರಿಗೂ ಸಚಿನ್‌ ಸ್ಪೂರ್ತಿ. ಅವರ ಕಾಲದಲ್ಲಿ ಶ್ರೇಷ್ಠ ಬೌಲರ್‌ಗಳ ಎದುರು ಸಚಿನ್‌ ಅಬ್ಬರಿಸಿ ದಾಖಲೆಗಳನ್ನು ಮೆಟ್ಟಿನಿಂತದ್ದು ನಮ್ಮೆಲ್ಲರಿಗೂ ಅದ್ಭುತ ಉದಾಹರಣೆಯಾಗಿದೆ," ಎಂದು ಕಾಮೆಂಟೇಟರ್‌ ಹಾಗು ಮಾಜಿ ಕ್ರಿಕೆಟರ್ ಪಾಮಿ ಎಂಬಾಂಗ್ವಾ ಅವರೊಟ್ಟಿಗೆ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಎಬಿಡಿ ಹೇಳಿದ್ದಾರೆಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ. "ವಿರಾಟ್‌ ಅಭಿಪ್ರಾಯವೂ ಅದೆ. ಸಚಿನ್‌ ನಮ್ಮೆಲ್ಲರಿಗೂ ಒಂದು ಗುಣಮಟ್ಟ ಕಾಯ್ದುಕೊಳ್ಳುವ ದರ್ಜೆ ನಿರ್ಮಿಸಿಕೊಟ್ಟಿದ್ದಾರೆ ಎಂದು. ಆದರೆ, ವೈಯಕ್ತಿಕವಾಗಿ ಹೇಳುವುದಾದರೆ, ರನ್‌ ಚೇಸಿಂಗ್‌ ವೇಳೆ ವಿರಾಟ್‌ ಕೊಹ್ಲಿ ದಿ ಬೆಸ್ಟ್‌. ಸಚಿನ್‌ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡಿದ್ದಾರೆ. ಆದರೆ ಚೇಸಿಂಗ್‌ನಲ್ಲಿ ವಿರಾಟ್‌ ಕೊಹ್ಲಿಯೇ ಅಗ್ರಮಾನ್ಯ," ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ವಿರಾಟ್‌ ಕೊಹ್ಲಿ ನಡುವೆ ಯಾರು ಉತ್ತಮರು ಎಂದು ಕೇಳಿದಾಗ, ಇಬ್ಬರೂ ಕ್ರಿಕೆಟಿಗರನ್ನು ಟೆನಿಸ್‌ ಲೋಕದ ಇಬ್ಬರು ದಿಗ್ಗಜರಿಗೆ ಎಬಿಡಿ ಹೋಲಿಕೆ ಮಾಡಿದ್ದಾರೆ. "ಇದಕ್ಕೆ ಉತ್ತರಿಸುವುದು ಬಹಳ ಕಷ್ಟ. ಆದರೆ ವಿರಾಟ್‌ ಅವರಲ್ಲಿ ಚೆಂಡನ್ನು ಬಡಿದಟ್ಟುವ ಕಲೆ ಸಹಜವಾಗಿಯೇ ಮೈಗೂಡಿದೆ. ಇದರಲ್ಲಿ ಸಂಶಯವೇ ಬೇಡ. ಟೆನಿಸ್‌ ರೀತಿಯಲ್ಲಿ ಹೇಳುವುದಾದರೆ ಕೊಹ್ಲಿ ಒಂದು ರೀತಿ ರೋಜರ್‌ ಫೆಡರರ್‌ ಇದ್ದಂತೆ. ಅದೇ ರೀತಿ ಸ್ಮಿತ್‌ ಅವರನ್ನು ರಾಫೆಲ್ ನಡಾಲ್‌ ಎನ್ನಬಹುದು. ಸ್ಮಿತ್‌ ಮಾನಸಿಕವಾಗಿ ಬಲಿಷ್ಠರು, ರನ್‌ ಗಳಿಸುವ ದಾರಿಯನ್ನು ಕಂಡುಕೊಳ್ಳುತ್ತಾರೆ. ಆದರೆ, ಸ್ವಾಭಾವಿಕ ಆಟ ಅವರಲ್ಲಿ ಆಣಲು ಸಿಗುವುದಿಲ್ಲ. ಆದರೂ ಹಲವು ದಾಖಲೆಗಳನ್ನು ಮೆಟ್ಟಿನಿಲ್ಲುತ್ತಾರೆ. ಸ್ಮಿತ್‌ ನಾ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಕೊಹ್ಲಿ ಕೂಡ ವಿಶ್ವದ ಎಲ್ಲೆಡೆ ರನ್‌ ಗಳಿಸಿದ್ದು, ಒತ್ತಡದ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ," ಎಂದು ವಿವರಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಂಡದ ಪರ ವಿರಾಟ್‌ ಕೊಹ್ಲಿ ಜೊತೆಯಾಗಿ ಆಡುವ ಎಬಿ ಡಿ'ವಿಲಿಯರ್ಸ್‌, ಭಾರತ ತಂಡದ ಹಾಲಿ ನಾಯಕ, "ಕ್ರಿಕೆಟ್‌ ಆಟಗಾರನಿಗಿಂತಲೂ ಆಳವಾದ ವ್ಯಕ್ತಿತ್ವ ಹೊಂದಿದ್ದಾರೆ," ಎಂದು ಹೇಳಿದ್ದಾರೆ. ಎಲ್ಲವೂ ಸರಿಯಿದಿದ್ದರೆ, ವಿರಾಟ್‌ ಕೊಹ್ಲಿ ಮತ್ತು ಎಬಿಡಿ ಈಗ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುತ್ತಿದ್ದರು. ಆದರೆ, ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ಕ್ಕೆ ಶುರುವಾಗಬೇಕಿದ್ದ ಟೂರ್ನಿಯನ್ನು ಮುಂದಿನ ಆದೇಶದ ವರೆಗೆ ರದ್ದುಪಡಿಸಲಾಗಿದ್ದು, ಸುರಕ್ಷಿತ ವಾತಾವರಣದಲ್ಲಿ ಮಾತ್ರ ಆಯೋಜಿಸುವುದಾಗಿ ಬಿಸಿಸಿಐ ತೀರ್ಮಾನಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LrBc1T

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...