
ಸುರೇಶ್ ಗೌಡ ಕಕ್ಕಲದೊಡ್ಡಿ (): ಸಮರ್ಪಕ ಸಾರಿಗೆ ಬಸ್ ಸಂಚಾರದ ಕೊರತೆಯಿಂದ ಜಾಲ ಹಳ್ಳಿ ಸಮೀಪದ ಕಕ್ಕಲ ದೊಡ್ಡಿ ಮಕ್ಕಳು ಕಾಲ್ನಡಿಯಲ್ಲೇ ಶಾಲೆಗೆ ಹೋಗುವಂತಾಗಿದೆ. ಜಾಲ ಹಳ್ಳಿ ಪಂಚಾಯಿತಿಯನ್ನು ಪಟ್ಟಣ ಪಂಚಾಯತ್‌ಗೆ ಏರಿಸಲು ಇಚ್ಛಾ ಶಕ್ತಿ ತೋರಿಸುವ ಶಾಸಕರು, ಪಟ್ಟಣದ ಪಕ್ಕವೇ ಇರುವ ಕಕ್ಕಲ ದೊಡ್ಡಿ ಗ್ರಾಮಸ್ಥರು ಹಲವು ತೊಂದರೆ ಅನುಭವಿಸುತ್ತಿದ್ದರೂ ಗಮನ ಹರಿಸಿಲ್ಲ. ತಾಲೂಕಿನ ಬಹುತೇಕ ಗ್ರಾಮಗಳಿಗೆ ರಸ್ತೆಗಳಿವೆ. ಆದರೆ, ಮೂಲ ಸೌಕರ್ಯಗಳ ಕೊರತೆ ಗ್ರಾಮದ ಜನರು ಎದುರಿಸುತ್ತಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಮೇಲೆ ಕೊಳಚೆ ನೀರು ಹರಿದಾಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ, ಮಳೆ ಬಂದರಂತೂ ಕೇಳೋದೇ ಬೇಡ. ಗ್ರಾಮದೊಳಗಿನ ರಸ್ತೆಗಳ ಮೇಲೆ ಕೊಳಚೆ ನೀರೇ ಹರಿದಾಡುತ್ತದೆ. ಇದರಿಂದ ಓಡಾಡಲು ತೊಂದರೆಯಾಗುತ್ತದೆ. ಗ್ರಾಮದ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಗ್ರಾಮಸ್ಥರು ಶಾಸಕ ಶಿವನ ಗೌಡ ನಾಯಕ ಅವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂಬುದು ಸ್ಥಳೀಯರ ಆರೋಪ. ಕೂಡಲೇ ಶಾಸಕರು ಗ್ರಾಮದ ಸಮಸ್ಯೆಗಳ ಕುರಿತು ಗಮನ ಹರಿಸಿ ಬಗೆಹರಿಸುವಂತೆ ಕಕ್ಕಲ ದೊಡ್ಡಿ ಜನರು ಮನವಿ ಮಾಡಿದ್ದಾರೆ. ಬಸ್ ಸೌಲಭ್ಯ ಕಲ್ಪಿಸಿ ಕಕ್ಕಲ ದೊಡ್ಡಿ ಗ್ರಾಮ ಇನ್ನೂ ಕೆಂಪು ಬಸ್ ಕಂಡಿಲ್ಲ. ಜಾಲ ಹಳ್ಳಿಯಿಂದ 4 ಕಿ. ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಸಾರಿಗೆ ಸಂಪರ್ಕವೇ ಇಲ್ಲ. ಕಾರ್ಯ ನಿಮಿತ್ತ ತುರ್ತಾಗಿ ಹೋಗಬೇಕಾದವರು ಬಾಡಿಗೆ ಆಟೋ ಮುಗಿಸಿಕೊಂಡು ಹೋಗ್ತಾರೆ. ಖಾಸಗಿ ವಾಹನದವರು ಬೇಕಾಬಿಟ್ಟಿ ಹಣ ಕೀಳುವುದರಿಂದ ಬಡ ಜನರಿಗೆ ತೊಂದರೆ ಆಗಿದೆ. ಇದ್ದವರು ಬೈಕ್, ಖಾಸಗಿ ವಾಹನಗಳ ಮುಖಾಂತರ ತೆರಳುತ್ತಾರೆ. ಶಾಲೆಗೆ ನಡೆದೆ ಹೋಗ್ತಾರೆ ಮಕ್ಕಳು..! ಕಕ್ಕಲ ದೊಡ್ಡಿಯಲ್ಲಿ ಐದನೇ ತರಗತಿವರೆಗೆ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಕ್ಕಳು ಜಾಲಹಳ್ಳಿ, ಕಮಲದಿನ್ನಿ ಹೋಗಬೇಕು. ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದಿರುವುರಿಂದ ಶಾಲೆಗೆ ಪ್ರತಿ ನಿತ್ಯ ನಡೆದು ಹೋಗ್ತಾರೆ ಮಕ್ಕಳು. ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಗೆ ಮೈದಾನವಿಲ್ಲದಿದ್ದರಿಂದ ಮಕ್ಕಳ ಆಟೋಟಕ್ಕೆ ತೊಂದರೆ ಆಗಿದೆ. ಕೂಡಲೇ ಶಾಲೆ ಮೈದಾನ, ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ. 'ಕಕ್ಕಲ ದೊಡ್ಡಿ ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸುವುದರ ಜತೆಗೆ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ, ಮಕ್ಕಳಿಗೆ ಮೈದಾನ ವ್ಯವಸ್ಥೆ ಮಾಡಿಕೊಡಬೇಕು' ಎಂದು ಸ್ಥಳೀಯ ಯುವಕ ಶಿವು ಪಾಟೀಲ್ ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/3CQDksm