
ಬೆಳಗಾವಿ: ಸ್ಥಳೀಯ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಕೊಠಡಿಗಳನ್ನು ಧ್ವಂಸ ಮಾಡಿದ ಆರೋಪದಡಿ ನಾರಾಯಣ ಗೌಡ ಬಣದ 40 ಕಾರ್ಯಕರ್ತರ ಮೇಲೆ ದಾಖಲಿಸಲಾಗಿದ್ದ ಪ್ರಕರಣವನ್ನು ನಗರದ 4ನೇ ಜೆಎಂಎಫ್‌ಸಿ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಪಾಲಿಕೆಯ ಮೇಯರ್ ಮತ್ತು ಉಪಮೇಯರ್ 2011ರ ನ.1 ರಂದು ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಯಲ್ಲಿನ ಕೊಠಡಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಹಾದೇವ ತಳವಾರ, ಗಣೇಶ ರೋಕಡೆ ಸೇರಿದಂತೆ 40 ಜನರ ಮೇಲೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣವನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಕರವೇ ಪರವಾಗಿ ನ್ಯಾಯವಾದಿ ಸುಧೀರ್ ನಿರ್ವಾಣಿ ವಾದ ಮಂಡಿಸಿದ್ದರು. ಸಂಭ್ರಮಾಚರಣೆಪ್ರಕರಣ ಖುಲಾಸೆಗೊಂಡ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ನ್ಯಾಯವಾದಿ ಸುಧೀರ ನಿರ್ವಾಣಿ ಅವರನ್ನು ಕರವೇ ಪದಾಧಿಕಾರಿಗಳು ಸನ್ಮಾನಿಸಿದರು. ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಮುಖಂಡರಾದ ದೀಪಕ ಗುಡಗನಟ್ಟಿ, ಗಣೇಶ ರೋಕಡೆ, ಸುರೇಶ ಗವನ್ನವರ, ಬಾಳು ಜಡಗಿ, ಶಾಂತಮ್ಮ ಟಿ.ಎಸ್., ಶಾಂತಾ ಹಣಬರ, ರಾಮಾ ಹೊನ್ನೂರ, ಹೊಳೆಪ್ಪ ಸುಳ್ಳದಾರ, ರಮೇಶ ತಳವಾರ ಇತರರು ಉಪಸ್ಥಿತರಿದ್ದರು.
from India & World News in Kannada | VK Polls https://ift.tt/2ZmuAwt