ಶಾಕಿಂಗ್‌ ನ್ಯೂಸ್‌; ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್‌ ಬೆಲೆ ಮತ್ತೆ ಏರಿಕೆ!

ಹೊಸದಿಲ್ಲಿ: ನಿತ್ಯ ನಿರಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌ ಹೊರಬಿದ್ದಿದೆ. ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್‌ ದರ ಸೋಮವಾರ 266 ರೂ. ಹೆಚ್ಚಳವಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆ.ಜಿ ಎಲ್ಪಿಜಿ ಸಿಲಿಂಡರ್‌ ದರ 2,278 ರೂ.ಗೆ ಜಿಗಿದಿದೆ. ಇದರ ಪರಿಣಾಮ ಹೋಟೆಲ್‌ ತಿಂಡಿಗಳ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಿದ್ದರೂ, ಜನತೆ ಮನೆಗಳಲ್ಲಿ ಬಳಸುವ 14.2 ಕೆ.ಜಿ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಸೋಮವಾರ ಯಾವುದೇ ವ್ಯತ್ಯಾಸವಾಗಿಲ್ಲ. ಹೀಗಾಗಿ ಗೃಹ ಬಳಕೆ ಸಿಲಿಂಡರ್‌ ಬಳಕೆದಾರರಿಗೆ ಈ ಹೆಚ್ಚಳದ ಬಿಸಿ ತಟ್ಟುವುದಿಲ್ಲ. ಕಳೆದ ಆಗಸ್ಟ್‌ನಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ ಎಲ್ಪಿಜಿ ಸಿಲಿಂಡರ್‌ ದರದಲ್ಲಿ 122 ರೂ. ಇಳಿಕೆಯಾಗಿತ್ತು. ಮೇನಲ್ಲಿ 45 ರೂ. ಕಡಿತವಾಗಿತ್ತು. ಆದರೆ ಅಂತಾ ರಾಷ್ಟ್ರೀಯ ಕಚ್ಚಾ ತೈಲದ ಏರುಗತಿಯೊಂದಿಗೆ ದೇಶಿ ಮಾರುಕಟ್ಟೆಯಲ್ಲಿ ಅನಿಲ ದರ ಕೂಡ ಹೆಚ್ಚಳವಾಗಿದೆ. ‘ಕೋವಿಡ್‌ ಬಿಕ್ಕಟ್ಟಿನ ಬಳಿಕ ಹೋಟೆಲ್‌ ಉದ್ಯಮದಲ್ಲಿ ತಿಂಡಿ ತಿನಿಸು ದರ ಏರಿಕೆ ಉಂಟಾಗಿರಲಿಲ್ಲ. ಆದರೆ ಇದೀಗ ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕನಿಷ್ಠ ಶೇ. 15-20 ಬೆಲೆ ಏರಿಕೆಯ ಸಾಧ್ಯತೆ ಇದೆ’ ಎಂದು ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ಅವರು ಹೇಳಿದ್ದಾರೆ. ನಾಗಾಲೋಟದ ಏರಿಕೆ ಅಂತಾರಾಷ್ಟ್ರೀಯ ಕಚ್ಚಾತೈಲ ದರ ಏರಿಳಿಕೆಗೆ ಅನುಸಾರವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿ ದಿನವೂ ಏರಿಳಿತವಾಗುತ್ತದೆ. ಆದರೆ ಎಲ್‌ಪಿಜಿ ಸಿಲಿಂಡರ್‌ ದರವನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಕಚ್ಚಾ ತೈಲ ದರ ದಾಖಲೆ ಮಟ್ಟದಲ್ಲಿ ಆದ ಏರಿಕೆ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಈಗಾಗಲೇ ಶತಕ ದಾಟಿದ್ದು, ಕೆಲವೆಡೆ 120 ರೂ. ತಲುಪಿದೆ. ಈ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ನ.1ರಿಂದ ಭಾರಿ ಹೆಚ್ಚಳ ನಿರೀಕ್ಷಿಸಲಾಗಿತ್ತು. ಆದರೆ, ಪ್ರಸ್ತುತ ವಾಣಿಜ್ಯ ಬಳಕೆ ಸಿಲಿಂಡರ್‌ ದರದಲ್ಲಿ ಮಾತ್ರ ಹೆಚ್ಚಳ ಮಾಡಿರುವುದು ಗೃಹ ಬಳಕೆಗೆ ಅಡುಗೆ ಅನಿಲ ಸಿಲಿಂಡರ್‌ ಉಪಯೋಗಿಸುವ ಜನತೆಗೆ ತುಸು ಸಮಾಧಾನ ತಂದಿದೆ.


from India & World News in Kannada | VK Polls https://ift.tt/3pZ2zWz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...