ಅರೆಭಾಷೆಯಲ್ಲಿ ಕಾರ್ಟೂನ್‌ ಚಾನೆಲ್‌..! ಯೂಟ್ಯೂಬ್ ವಾಹಿನಿಗೆ ಕೊಡಗಿನ ಶಿಕ್ಷಕಿ ರೂವಾರಿ..!

ಸುನಿಲ್‌ ಪೊನ್ನೇಟಿ: ಮತ್ತು ದಕ್ಷಿಣ ಕನ್ನಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಅರೆ ಭಾಷಿಕರು ಈಗ ತಮ್ಮದೇ ಭಾಷೆಯಲ್ಲಿ ಕಾರ್ಟೂನ್‌ ಮಜಾವನ್ನು ಸವಿಯಬಹುದು. ಸಿರಕಜೆ ರಜಿನಿ ಗಿರೀಶ್‌ ಕಲ್ಪನೆಯಲ್ಲಿ ಅರಳುತ್ತಿರುವ ಬೊಂಬೆಗಳ ಲೋಕದ ಈ ಸೌಂದರ್ಯ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಸಾಕಷ್ಟು ಮಂದಿ ಇದನ್ನು ಆಸ್ವಾದಿಸಿ ಖುಷಿ ಪಡುತ್ತಿದ್ದಾರೆ. ಕೊರೊನಾ ಲಾಕ್‌ ಡೌನ್‌ ಹಲವು ವಿಭಿನ್ನ ಪ್ರಯೋಗಗಳಿಗೂ ದಾರಿ ಮಾಡಿಕೊಡುವ ಮುಖಾಂತರ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಯೂಟ್ಯೂಬ್‌ನಲ್ಲಿ ಈಗ ಲಭ್ಯವಿರುವ ಅರೆ ಭಾಷೆಯ ಕಾರ್ಟೂನ್‌ ಕೂಡ ಲಾಕ್‌ ಡೌನ್‌ ಅವಧಿಯಲ್ಲಿ ಜನಿಸಿದ ಕೂಸು. ಮೂಲತಃ ಕೊಡಗಿನ ಭಾಗಮಂಡಲದವರಾದ ಬೆಂಗಳೂರಿನಲ್ಲಿ ಶಿಕ್ಷಕಿಯಾಗಿರುವ ಸಿರಕಜೆ ರಜಿನಿ ಗಿರೀಶ್‌, ಕಾರ್ಟೂನ್‌ ಚಾನಲ್‌ನ ರೂವಾರಿ. ಕೊಡಗು, ಸುಳ್ಯ ಮತ್ತು ಸುತ್ತಮುತ್ತಲಿನ ಒಕ್ಕಲಿಗ ಗೌಡ ಜನಾಂಗದ ಆಡು ಭಾಷೆಯಾಗಿರುವ ಅರೆ ಭಾಷೆಯಲ್ಲಿ ರಜಿನಿ ಗಿರೀಶ್‌ ಕಾರ್ಟೂನ್‌ ಸರಣಿಗಳನ್ನು ತಯಾರಿಸುತ್ತಿದ್ದಾರೆ. ಅರೆ ಭಾಷೆಗೆ ಸಂಬಂಧಿಸಿದಂತೆ ಇದು ಮೊದಲ ಪ್ರಯೋಗ. 5 - 10 ನಿಮಿಷಗಳ ಅವಧಿಯಲ್ಲಿರುವ ಈ ಕಾರ್ಟೂನ್‌ಗಳನ್ನು ವೀಕ್ಷಿಸಿದವರಿಂದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ. ಕಾರ್ಟೂನ್‌ ತಯಾರಿಗೆ ರಜನಿ ಹೆಚ್ಚುವರಿ ಹಣವನ್ನೇನೂ ಹೂಡಿಕೆ ಮಾಡಿಲ್ಲ. ಲಾಭದ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಮಾತೃ ಭಾಷೆಗೆ ಏನಾದರೂ ಕಾಣಿಕೆ ನೀಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ತಮ್ಮ ಉದ್ಯೋಗದ ಜೊತೆಯಲ್ಲೇ ಈ ಕೆಲಸವನ್ನೂ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಪತಿ ಸಿರಕಜೆ ಗಿರೀಶ್‌ ಸಾಥ್‌ ಕೊಡುತ್ತಿದ್ದಾರೆ. ಕಾರ್ಟೂನ್‌ ರಚಿಸಲು ರಜಿನಿ ಮೊಬೈಲ್‌ ಆಪ್‌ಗಳನ್ನು ಬಳಸಿಕೊಳ್ಳುತ್ತಾರೆ. 7ನೇ ತರಗತಿಯಲ್ಲಿ ಓದುತ್ತಿರುವ ಪುತ್ರ ರಚನ್‌ ಗಿರೀಶ್‌ನಿಂದ ಆರಂಭದ ದಿನಗಳಲ್ಲಿ ಆಪ್‌ಗಳ ಉಪಯೋಗ, ತಾಂತ್ರಿಕ ಅಂಶಗಳನ್ನು ಕಲಿತುಕೊಂಡಿದ್ದಾಗಿ ಹೇಳುವ ರಜಿನಿ, ಈಗ ತಾವೇ ಸ್ವತಂತ್ರವಾಗಿ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ವೃತ್ತಿ ಪರ ಡಬ್ಬಿಂಗ್‌ ಕಲಾವಿದರಂತೆ ಕಾರ್ಟೂನ್‌ ಪಾತ್ರಗಳಿಗೆ ಧ್ವನಿಯನ್ನೂ ಕೊಡುತ್ತಾರೆ. ಅರೆ ಭಾಷೆ, ಕನ್ನಡದ ವಿಶಿಷ್ಟವಾದ ಉಪ ಭಾಷೆ. ಹವ್ಯಕ ಕನ್ನಡವನ್ನು ಸ್ವಲ್ಪ ಮಟ್ಟಿಗೆ ಹೋಲುವ ಈ ಭಾಷೆ ಕಿವಿಗೆ ಇಂಪು ಕೊಡುತ್ತದೆ. ಈ ಭಾಷೆಯನ್ನು ಕಾರ್ಟೂನ್‌ನ ಗೊಂಬೆಗಳಿಗೆ ಅನ್ವಯಿಸಿರುವ ರಜಿನಿ ಮತ್ತಷ್ಟು ಸೊಗಸು ಮೂಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನ ಜೀವನ, ಕೃಷಿ ಬದುಕು, ದೈನಂದಿನ ಬದುಕು, ನೀತಿ ಕತೆಗಳು ಇಲ್ಲಿ ಕಾರ್ಟೂನ್‌ ಮೂಲಕ ವ್ಯಕ್ತಪಡಿಸಲಾಗಿದೆ. 'ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸಮಯ ಕಳೆಯಲು ದಾರಿ ಹುಡುಕಿದಾಗ ಸಿಕ್ಕಿದ ಐಡಿಯಾ ಇದು. ನಮ್ಮ ಅರೆಭಾಷೆಯಲ್ಲಿ ಈತನಕ ಯಾರೂ ಈ ಪ್ರಯೋಗ ಮಾಡಿರಲಿಲ್ಲ. ಹಾಗಾಗಿ ಪ್ರಯತ್ನ ಪಟ್ಟೆವು. ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮತ್ತಷ್ಟು ಹೊಸತನಗಳೊಂದಿಗೆ ಕಾರ್ಟೂನ್‌ ರಚನೆಯ ಯೋಚನೆಗಳಿವೆ, ಎಂದು ತಮ್ಮ ಸಾಹಸವನ್ನು ವಿವರಿಸುತ್ತಾರೆ, ಅರೆ ಭಾಷೆ ಚಾನಲ್‌ನ ನಿರ್ಮಾಪಕಿ ಸಿರಕಜೆ ರಜಿನಿ ಗಿರೀಶ್‌.


from India & World News in Kannada | VK Polls https://ift.tt/3zCh8Ro

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...