ಯಾರಿದು ವೆಂಕಟೇಶ್ ಅಯ್ಯರ್‌? ಯುವ ಓಪನರ್‌ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಸಂಗತಿಗಳಿವು!

ಅಬುಧಾಬಿ: ಜಗತ್ತಿನ ಐಶಾರಾಮಿ ಟಿ20 ಲೀಗ್‌ ಟೂರ್ನಿ ಆಗಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಹಲವು ಹೊಸ ಪ್ರತಿಭೆಗಳನ್ನು ಹೆಕ್ಕಿಕೊಟ್ಟ ಹೆಗ್ಗಳಿಕೆ ಹೊಂದಿದೆ. ಓಪನರ್‌ ಶುಭಮನ್ ಗಿಲ್, ವೇಗಿ ಪ್ರಸಿಧ್ ಕೃಷ್ಣ ಅವರಂತಹ ಹಲವು ಪ್ರತಿಭೆಗಳು ಇಂದು ಕೆಕೆಆರ್‌ ತಂಡದ ಮೂಲಕ ಭಾರಿ ಸದ್ದು ಮಾಡಿದ್ದಾರೆ. ಈ ಪಟ್ಟಿಗೆ ಈಗ ಹೊಸ ಹೆಸರೊಂದು ಸೇರ್ಪಡೆಯಾಗಿದೆ. ಟೂರ್ನಿಯ ಎರಡನೇ ಚರಣದಲ್ಲಿ ಪದಾರ್ಪಣೆ ಮಾಡಿರುವ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ವೆಂಕಟೇಶ್ ಅಯ್ಯರ್‌ ಈಗ ಮನೆ ಮನೆ ಮಾತಾಗಿದ್ದಾರೆ. ಘಟಾನುಘಟಿ ಬೌಲರ್‌ಗಳ ಎದುರು ಕಿಂಚಿತ್ತೂ ಭಯವಿಲ್ಲದಂತೆ ಬ್ಯಾಟ್‌ ಬೀಸುತ್ತಿರುವ ಯುವಕ ಭಾರಿ ಸದ್ದು ಮಾಡಿದ್ದಾನೆ.' ಸೆಪ್ಟೆಂಬರ್‌ 20ರಂದು ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ವೆಂಕಟೇಶ್ ಅಯ್ಯರ್‌ ಕೇವಲ 27 ಎಸೆತಗಳಲ್ಲಿ ಅಜೇಯ 41 ರನ್‌ಗಳನ್ನು ಚೆಚ್ಚಿದ್ದರು. ಈಗ ಸೆ. 23ರಂದು ನಡೆದ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕೇವಲ 30 ಎಸೆತಗಳಲ್ಲಿ 4 ಫೋರ್ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 53 ರನ್‌ ಬಾರಿಸಿ ಕೆಕೆಆರ್‌ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು. ಮಧ್ಯ ಪ್ರದೇಶ ಮೂಲದ 25 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಮುಂಬೈ ಇಂಡಿಯನ್ಸ್‌ನ ಅನುಭವಿ ವೇಗಿಗಳಾದ ಟ್ರೆಂಟ್‌ ಬೌಲ್ಟ್‌ ಮತ್ತು ಆಡಮ್‌ ಮಿಲ್ನ್‌ ಎದುರು ಎದುರಿಸಿದ ಮೊದಲ ಎಸೆತಗಳಲ್ಲೇ ಸಿಕ್ಸರ್‌ ಬಾರಿಸಿದರೆ, ಸ್ಟ್ರೈಕ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಎದುರು ಮೊದಲ ಎಸೆತದಲ್ಲಿ ಫೋರ್‌ ಬಾರಿಸಿ ಐಪಿಎಲ್‌ ಜಗತ್ತಿನಲ್ಲಿ ಮೆರೆಯುವ ಸುಳಿವು ನೀಡಿದ್ದಾರೆ. ತಮ್ಮ 19ನೇ ವಯಸ್ಸಿಗೆ ಮಧ್ಯ ಪ್ರದೇಶ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದ ವೆಂಕಟೇಶ್ ಅಯ್ಯರ್‌ ಕೇವಲ ಓಪನರ್‌ ಮಾತ್ರವಲ್ಲ ಆಲ್‌ರೌಂಡರ್ ಕೂಡ. ಮಧ್ಯ ಪ್ರದೇಶ ಪರ ಆಡಿದ ಮೊದಲ ಪಂದ್ಯದಲ್ಲೇ ರೈಲ್ವೇಸ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಮಹೇಶ್‌ ರಾವತ್‌ ಅವರ ವಿಕೆಟ್‌ ಪಡೆದಿದ್ದ ಅಯ್ಯರ್‌ ಪರಿಣಾಮಕಾರಿ ಬೌಲರ್‌. 2015ರಲ್ಲಿ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ 10 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ 24 ಪಂದ್ಯಗಳನ್ನು ಆಡಿರುವ ಅವರು ಈವರೆಗೆ ಒಟ್ಟಾರೆ 39 ಟಿ20 ಪಂದ್ಯಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಿಂದ ಅಯ್ಯರ್‌ 227 ರನ್‌ಗಳನ್ನು ಬಾರಿಸಿದ್ದರು. ಆದರೆ, ಅವರ ಹೆಸರು ರಾರಾಜಿಸಲು ಶುರುವಾಗಿದ್ದು ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್ ಎದುರು 198 ರನ್‌ಗಳನ್ನು ಸಿಡಿಸಿದಾಗ. ಬಲಗೈ ಮಧ್ಯಮ ವೇಗಿ ಆಗಿರುವ ಅವರು ಅದೇ ಟೂರ್ನಿಯಲ್ಲಿ ಅವರು ಮೂರು ವಿಕೆಟ್‌ಗಳನ್ನು ಕೂಡ ಪಡೆದಿದ್ದರು. ಐಪಿಎಲ್ 2021 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಗೂ ಮೊದಲೇ ಮುಂಬೈನಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸಿದ್ದ ಕೆಕೆಆರ್‌ ತಂಡ ವೆಂಕಟೇಶ್ ಅಯ್ಯರ್ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕೆಕೆಆರ್‌ ಭರವಸೆಯನ್ನು ಉಳಿಸಿಕೊಂಡಿರುವ ಅಯ್ಯರ್ ಭವಿಷ್ಯದ ತಾರೆ ಎಂಬ ಸುಳಿವು ನೀಡಿದ್ದಾರೆ. 360 ಡಿಗ್ರಿ ಬ್ಯಾಟಿಂಗ್‌ ಶೈಲಿಯ ಆಟಗಾರ ಮುಂದಿನ ದಿನಗಳಲ್ಲೂ ಇದೇ ಸ್ಥಿರತೆ ಕಾಯ್ದುಕೊಳ್ಳುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ. ಡಾಕ್ಟರ್‌ ಅಥವಾ ಇಂಜಿನಿಯರ್‌ ಆಗಲು ಬಯಸಿದ್ದ ವೆಂಕಟೇಶ್‌ ಅಯ್ಯರ್‌ ಕೊನೆಗೆ ಕ್ರಿಕೆಟ್‌ನಲ್ಲಿ ವೃತ್ತಿಬದುಕು ಕಂಡುಕೊಳ್ಳುವ ನಿರ್ಧಾರ ಮಾಡಿದರು. ಇದಕ್ಕಾಗಿ ತಮ್ಮ ತಾಯಿಯ ಮನವೊಲಿಸಿದ್ದಾಗಿಯೂ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಕ್ರಿಕೆಟ್‌ನಲ್ಲಿ ಅಯ್ಯರ್‌ಗೆ ಉಜ್ವಲ ಭವಿಷ್ಯವಿರುವುದಂತೂ ನಿಜ. ಈ ಬಾರಿಯ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಲ್ಲೂ ಅಯ್ಯರ್‌ ಇದೇ ರೀತಿ ಅಬ್ಬರಿಸಿದರೆ, ಮುಂದಿನ ವರ್ಷ ನಡೆಯಲಿರುವ ಮೆಗಾ ಆಕ್ಷನ್‌ (ಆಟಗಾರರ ಬೃಹತ್ ಮಟ್ಟದ ಹರಾಜು ಪ್ರಕ್ರಿಯೆ)ನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗುವ ಎಲ್ಲಾ ಸಾಧ್ಯತೆಗಳಿದೆ. ಮುಂಬೈ-ಕೆಕೆಆರ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 155 ರನ್ (ರೋಹಿತ್‌ ಶರ್ಮಾ 33, ಕ್ವಿಂಟನ್‌ ಡಿ;ಕಾಕ್ 55, ಕೈರೊನ್ ಪೊಲಾರ್ಡ್‌ 21, ಲಾಕಿ ಫರ್ಗ್ಯೂಸನ್ 27ಕ್ಕೆ 2, ಪ್ರಸಿಧ್ ಕೃಷ್ಣ 43ಕ್ಕೆ 2). ಕೋಲ್ಕತಾ ನೈಟ್‌ ರೈಡರ್ಸ್‌: 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 159 ರನ್‌ (ವೆಂಕಟೇಶ್ ಅಯ್ಯರ್ 53, ರಾಹುಲ್ ತ್ರಿಪಾಠಿ ಅಜೇಯ 74; ಜಸ್‌ಪ್ರೀತ್‌ ಬುಮ್ರಾ 43ಕ್ಕೆ 3). ಪಂದ್ಯಶ್ರೇಷ್ಠ: ಸುನಿಲ್ ನರೈನ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XLTT9X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...