ವಿಶ್ವಸಂಸ್ಥೆ: ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೆ ಒಳಪಟ್ಟ ಅತಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರನ್ನು ಹೊಂದಿರುವ ಕುಖ್ಯಾತಿ ಪಾಕಿಸ್ತಾನಕ್ಕೆ ಇದೆ ಎಂದು ಸಾಮಾನ್ಯ ಸಭೆಯಲ್ಲಿ ಹೇಳಿದೆ. ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಕುರಿತಾಗಿ ಉಲ್ಲೇಖಿಸಿದ್ದಕ್ಕೆ ನೆರೆಯ ದೇಶದ ವಿರುದ್ಧ ಭಾರತ ಹರಿಹಾಯ್ದಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಒಳಗೊಂಡ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಹಿಂದೆ, ಈಗ ಮತ್ತು ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಮತ್ತೆ ಪ್ರತಿಪಾದಿಸಿದೆ. ವಿಶ್ವಸಂಸ್ಥೆ ಅಧಿವೇಶನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ತನ್ನ ಹಕ್ಕನ್ನು ಬಳಸಿಕೊಂಡ ಭಾರತ, ಭಯೋತ್ಪಾದಕರಿಗೆ ನೆಲೆ ಕಲ್ಪಿಸುವ, ಸಹಾಯ ಮಾಡುವ ಹಾಗೂ ಸಕ್ರಿಯವಾಗಿ ಬೆಂಬಲಿಸುವ ಇತಿಹಾಸ ಹಾಗೂ ನೀತಿಯನ್ನು ಪಾಕಿಸ್ತಾನ ಹೊಂದಿದೆ ಎಂದು ಟೀಕಿಸಿದೆ. 'ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಉಗ್ರರೆಂದು ನಿರ್ಬಂಧ ಹೇರಿದ ಭಯೋತ್ಪಾದಕರಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಹೊಂದಿರುವ ಅಪಖ್ಯಾತಿ ಪಾಕಿಸ್ತಾನಕ್ಕೆ ಇದೆ. ಒಸಾಮಾ ಬಿನ್ ಲ್ಯಾಡೆನ್‌ಗೆ ಪಾಕಿಸ್ತಾನ ಆಶ್ರಯ ನೀಡಿತ್ತು. ಇಂದಿಗೂ ಪಾಕಿಸ್ತಾನದ ನಾಯಕತ್ವ ಆತನನ್ನು 'ಹುತಾತ್ಮ' ಎಂದೇ ವೈಭವೀಕರಿಸುತ್ತಿದೆ' ಎಂದು ಶುಕ್ರವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ವಾಗ್ದಾಳಿ ನಡೆಸಿದರು. ತನ್ನ ಹಿತ್ತಲಿನಲ್ಲಿ ಪೋಷಿಸುತ್ತಿರುವುದರಿಂದ, ಪಾಕಿಸ್ತಾನವು ತಾನೇ ಕಿಚ್ಚು ಹೊತ್ತಿಸಿ, ತಾನೇ ಬೆಂಕಿ ನಿಂದಿಸುವವನಂತೆ ನಾಟಕವಾಡುತ್ತಿದೆ. ಅದರ ನೀತಿಗಳಿಂದ ಇಡೀ ಜಗತ್ತು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು. 'ವಿಶ್ವಸಂಸ್ಥೆ ಒದಗಿಸಿರುವ ವೇದಿಕೆಯನ್ನು ನನ್ನ ದೇಶದ ವಿರುದ್ಧ ತನ್ನ ಸುಳ್ಳು ಹಾಗೂ ಅಪಾಯಕಾರಿ ಪ್ರಚಾರಗಳನ್ನು ನಡೆಸಲು ಪಾಕಿಸ್ತಾನದ ನಾಯಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದು ಮೊದಲ ಸಲವೇನಲ್ಲ ಎನ್ನುವುದು ಖೇದನೀಯ. ಭಯೋತ್ಪಾದಕರು ಮುಕ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವಾಗ, ಜನಸಾಮಾನ್ಯರು ಅದರಲ್ಲಿಯೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ ಜೀವನ ಶೋಚನೀಯವಾಗಿರುವ ಸಂದರ್ಭದಲ್ಲಿ ತನ್ನ ದೇಶದ ಹೀನಾಯ ಸ್ಥಿತಿಯಿಂದ ಜಗತ್ತಿನ ಗಮನವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಸ್ನೇಹಾ ಟೀಕಿಸಿದರು. ಪಾಕಿಸ್ತಾನದ ರೀತಿಯಲ್ಲದೆ, ಭಾರತವು ಮಾಧ್ಯಮ ಸ್ವಾತಂತ್ರ್ಯ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದಿದೆ. ಅದು ನಮ್ಮ ಸಂವಿಧಾನದ ನಿಗಾ ಮತ್ತು ರಕ್ಷಣೆಯನ್ನು ಮಾಡುತ್ತಿದೆ ಎಂದು ವಿವರಿಸಿದರು. 'ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವು ಈ ಹಿಂದೆ, ಈಗ ಮತ್ತು ಮುಂದೆ ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗಗಳಾಗಿರುತ್ತವೆ. ಇದು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನೂ ಒಳಗೊಂಡಿರುತ್ತದೆ. ತಾನು ಅಕ್ರಮವಾಗಿ ಅತಿಕ್ರಮಿಸಿರುವ ಎಲ್ಲ ಪ್ರದೇಶಗಳನ್ನೂ ತೆರವುಗೊಳಿಸುವಂತೆ ನಾವು ಪಾಕಿಸ್ತಾನಕ್ಕೆ ಸೂಚಿಸುತ್ತೇವೆ' ಎಂದು ಹೇಳಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಾತನಾಡಲಿದ್ದಾರೆ. ಕೋವಿಡ್ ಹೋರಾಟದಿಂದ ಚೇತರಿಸಿಕೊಂಡು, ಸುಸ್ಥಿರತೆಯನ್ನು ಮರು ನಿರ್ಮಿಸುವುದು, ಭೂಗ್ರಹದ ಅಗತ್ಯಗಳಿಗೆ ಸ್ಪಂದಿಸುವುದು, ಜನರ ಹಕ್ಕುಗಳನ್ನು ಗೌರವಿಸುವುದು ಈ ಬಾರಿಯ ಚರ್ಚೆಯ ವಸ್ತವಾಗಿದೆ.
from India & World News in Kannada | VK Polls https://ift.tt/3ENAbvH