ಮೈಸೂರು: ಜಿಲ್ಲಾಧಿಕಾರಿಯಾಗಿದ್ದ ಅವರನ್ನು ರಾಜಕೀಯ ನಾಯಕರೊಂದಿಗಿನ ತೀವ್ರ ಸಮರದ ಬಳಿಕ ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರಿ ಬಂಗಲೆ ಆವರಣದಲ್ಲಿ ಈಜುಕೊಳ ನಿರ್ಮಾಣ ವಿಚಾರ ಭಾರಿ ವಿವಾದ ಸೃಷ್ಟಿಸಿತ್ತು. ಆದರೆ ಅವರ ವರ್ಗಾವಣೆಯಾಗಿ ತಿಂಗಳುಗಳು ಉರುಳಿದರೂ ರಾಜಕೀಯ ಮುಖಂಡರ ಆರೋಪಗಳು ನಿಂತಿಲ್ಲ. ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದ ಜೆಡಿಎಸ್ ಶಾಸಕ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆರೋಪಿಸಿದ್ದಾರೆ. ಇದಕ್ಕೆ ಅವರು ದಾಖಲೆಗಳನ್ನು ಕೂಡ ಪ್ರದರ್ಶಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್‌ಟಿ ಸೇರಿ 9 ರೂ ಆಗುತ್ತದೆ. ಆದರೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೈಮಗ್ಗ ಇಲಾಖೆಯವರಿಂದ ಖರೀದಿಸದೆ, ಖಾಸಗಿಯವರಿಂದ ಬ್ಯಾಗ್ ಖರೀದಿಸಿದ್ದಾರೆ. ಈ ಒಂದು ಬ್ಯಾಗ್ ಬೆಲೆ 52 ರೂ. ಇದೆ ಎಂದು ಆರೋಪಿಸಿದರು. ಬ್ಯಾಗ್ ಮೇಲೆ ಕೇವಲ "ನಾನು ಪರಿಸರ ಸ್ನೇಹಿ" ಎಂಬ ಸಾಲು ಹಾಗೂ ಹಾಗೂ ಚಿಹ್ನೆ ಮುದ್ರಣ ಮಾಡಿಸಲು, ಪ್ರತಿ ಚೀಲಕ್ಕೆ 42 ರೂ. ಬಿಲ್ ಮಾಡಿದ್ದಾರೆ. ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಇದಕ್ಕೆ ವಾಸ್ತವವಾಗಿ ತಗುಲುವುದು 1,47,15,000 ರೂಪಾಯಿ. ಆದರೆ 7 ಕೋಟಿಗೂ ಅಧಿಕ ರೂಪಾಯಿ ನೀಡಿ ಖರೀದಿ ಮಾಡಲಾಗಿದೆ. ಅಂದರೆ 6 ಕೋಟಿ 18 ಲಕ್ಷ ರೂ. ನಡೆದಿದೆ. ರೋಹಿಣಿ ಸಿಂಧೂರಿ ಆರು ಕೋಟಿ ರೂ ಕಿಕ್ ಬ್ಯಾಕ್ ಪಡೆದಿದ್ದಾರೆ. ಎಂದು ದೂರಿದರು. ಮೈಸೂರು ಕೌನ್ಸಿಲ್ ಒಪ್ಪಿಗೆ ಇಲ್ಲದೆ ಈ ಖರೀದಿ ಮಾಡಿದ್ದಾರೆ. ಇದು ಮೈಸೂರು ಪಟ್ಟಣ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಸ್ಥಳೀಯವಾಗಿಯೇ ಬ್ಯಾಗ್ ಖರೀದಿ ನಡೆಯಬೇಕಿತ್ತು. ಆದರೆ ಇಡೀ ಜಿಲ್ಲೆಗೆ ಸೇರಿ ಅವರು ಈ ವ್ಯವಹಾರ ನಡೆಸಿದ್ದಾರೆ ಎಂದರು. ಈ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು. ರೋಹಿಣಿ ಅವರನ್ನು ಕರ್ತವ್ಯದಿಂದ ವಜಾ ಮಾಡದಿದ್ದರೆ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ ಎಂದು ಹೇಳಿದರು.
from India & World News in Kannada | VK Polls https://ift.tt/3l7arl9