ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ 82 ವಾಡ್‌ಗಳ 842 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಶಾಂತಿಯುತವಾಗಿ ಆರಂಭವಾಗಿದೆ. ಆದರೆ ಮತದಾನದ ಸಮಯದಲ್ಲಿ ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಿಲ್ಲವೆಂಬ ಕಾರಣಕ್ಕೆ ವಾರ್ಡ್ ನಂಬರ್ 28ರಲ್ಲಿನ ಹಲವು ಮತಗಟ್ಟೆಗಳಲ್ಲಿ ಮತದಾನವನ್ನು ಸ್ಥಗಿತ ಮಾಡಲಾಗಿದೆ. ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬೆಳಗಿನ 9 ಗಂಟೆಯವರೆಗೆ ಶೇ.7.73 ಮತದಾನ ನಡೆದಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 28ನೇ ವಾರ್ಡ್‌ನಲ್ಲಿ ಬಳಕೆ ಮಾಡಿಲ್ಲ. ಇದು ಮತದಾರರಲ್ಲಿ ಮತ್ತಷ್ಟು ಸಂಶಯ ಮೂಡಿಸಿದೆ. ಹೀಗಾಗಿ ಮತದಾನವನ್ನ ಬಂದ್ ಮಾಡಿಸುತ್ತಿದ್ದೇವೆ ಎಂದು ವಾರ್ಡ್‌ನ ಸಾವಂತನವರ ಹೇಳಿದ್ದಾರೆ. ಈ ಬಗ್ಗೆ ಎಎಪಿಯ ಸಂತೋಷ ನರಗುಂದ ಕೂಡಾ ಬೇಸರ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ನಡೆಸುತ್ತಿದ್ದಾರೆ. ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಬೇಕಿತ್ತು ಎಂದು ಹೇಳಿದರು. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು ಕುಟುಂಬ ಸದಸ್ಯರೊಂದಿಗೆ ಬುದ್ಧರಕ್ಕಿತ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ, ಮತದಾನದ ಹಕ್ಕು ಚಲಾಯಿಸಿದರು. ಹೊರಟ್ಟಿ ಬೇಸರ ಹುಬ್ಬಳ್ಳಿ ಧಾರವಾಡ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಲ್ಯಾಮಿಂಗ್ಟನ್ ಬಾಲಕರ ಪ್ರೌಢ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಚುನಾವಣೆಗಳು ಯಾವುದೇ ನೈತಿಕತೆಯ ಮೇಲೆ ನಡೆಯುತ್ತಿಲ್ಲ. ಚುನಾಯಿತ ಜನಪ್ರತಿನಿದಿಗಳು ಎಲ್ಲಿಯವರೆಗೆ ಜನಪರ ಕೆಲಸ ಮಾಡುವುದಿಲ್ಲವೊ ಅಲ್ಲಿಯವರೆಗೂ ಅನೈತಿಕ ಚುನಾವಣೆಗಳು ಮುಂದುವರೆಯುತ್ತವೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಕೆಲಸ ಮಾಡಬೇಕು ಎಂದರು. ಇನ್ನು ರಾಜ್ಯದಲ್ಲಿ ಕೊರೋನಾ ಸೋಂಕು ಇರುವುದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಕಿಯೇ ಮತದಾನ ಮಾಡಬೇಕು, ಮಾಸ್ಕ್ ಹಾಕದೇ ಇರುವವರಿಗೆ ಮತ ಹಾಕಲು ಅವಕಾಶ ಕೊಡಬಾರದು ಎಂದರು. ಸಭಾಪತಿ ನಿವಾಸ ಮಂಜೂರಾಗದಿರುವದಕ್ಕೆ ಬೇಸರ ವ್ಯಕ್ತಪಡಿಸಿದ ಅವರು,ಕಳೆದ 9 ತಿಂಗಳಿಂದ ಪತ್ರ ಬರೆಯುತ್ತಿದ್ದೇನೆ. ಇದುವರೆಗೆ 7 ಪತ್ರ ಬರೆದಿದ್ದೇನೆ. ಇಂದು 8 ನೇ ಪತ್ರ ಬರೆಯುತ್ತೇನೆ. ಇದು ಕೊನೆಯ ಪತ್ರ ಇನ್ನು ಮುಂದೆ ಪತ್ರ ಬರೆಯುವುದಿಲ್ಲ. ಮಂಜೂರು ಮಾಡಿದರೆ ಮಾಡಲಿ ಇಲ್ಲವಾದಲ್ಲಿ ಸುಮ್ಮನಾಗುತ್ತೇನೆ. ನನಗೇನು ಭೀಕ್ಷೆ ಬೇಡುವ ಪರಿಸ್ಥಿತಿ ಬಂದಿಲ್ಲ ಎಂದು ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದರು.
from India & World News in Kannada | VK Polls https://ift.tt/3DM0p11