'ಸ್ಪರ್ಧಾತ್ಮಕ ಪಿಚ್‌ ಒದಗಿಸಲು ಭಾರತ ಹೆದರಬಾರದು' ಎಂದ ಶೊಯೇಬ್ ಅಖ್ತರ್‌!

ಹೊಸದಿಲ್ಲಿ: ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ನೀಡಲಾಗುತ್ತಿರುವ ಪಿಚ್‌ಗಳ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯ ಮೂರು ಹಣಾಹಣಿಗಳ ಮುಕ್ತಾಯಕ್ಕೆ ಭಾರತ ತಂಡ 2-1 ಅಂತರದ ಮೇಲುಗೈ ಪಡೆದಿದೆ. ಪ್ರಥಮ ಟೆಸ್ಟ್‌ನಲ್ಲಿ ಸಿಕ್ಕ ಫ್ಲ್ಯಾಟ್ ಪಿಚ್‌ನ ಲಾಭ ಪಡೆದ ಇಂಗ್ಲೆಂಡ್‌ 227 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಸ್ಪಿನ್‌ ಪಿಚ್‌ಗಳನ್ನು ಬಳಕೆಗೆ ತಂದು ದ್ವಿತೀಯ ಟೆಸ್ಟ್‌ನಲ್ಲಿ 317 ರನ್‌ ಮತ್ತು ತೃತೀಯ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಜಯ ದಾಖಲಿಸಿತ್ತು. ಈ ಬಗ್ಗೆ ಮಾತನಾಡಿರುವ ಶೊಯೇಬ್‌ ಅಖ್ತರ್‌, ಇಂತಹ ಪಿಚ್‌ಗಳು ಟೆಸ್ಟ್‌ ಕ್ರಿಕೆಟ್‌ಗೆ ಯೋಗ್ಯವಾದುದ್ದಲ್ಲ. ಭಾರತ ತಂಡ ಬಲಿಷ್ಠ ತಂಡವಾಗಿದೆ. ಈ ರೀತಿಯ ಪಿಚ್‌ಗಳನ್ನು ನೀಡುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಹ್ಮದಾಬಾದ್‌ನ ಮೊಟೆರಾದಲ್ಲಿ ಇರುವ ನೂತನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್‌ 4ರಂದು ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಇಲ್ಲಿ ಭಾರತ ತಂಡ ಸೋಲುವ ಬಗ್ಗೆ ಹೆದರದೇ ಸ್ಪರ್ಧಾತ್ಮಕ ಪಿಚ್‌ ನೀಡುವ ಅಗತ್ಯವಿದೆ ಎಂದು ಅಖ್ತರ್‌ ಅಭಿಪ್ರಾಯ ಪಟ್ಟಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಕನಿಷ್ಠ ಡ್ರಾ ಫಲಿತಾಂಶ ಸಿಕ್ಕರೆ ಜೂನ್ 18-22ರವರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯಕ್ಕೆ ಅರ್ಹತೆ ಲಭ್ಯವಾಗಲಿದೆ. ಸ್ಪಿನ್‌ ಪಿಚ್‌ ಮತ್ತು ತವರಿನಂಗಣದ ಯಾವುದೇ ಲಾಭಗಳು ಇಲ್ಲದೇ ಇದ್ದರೂಕೂಡ ಇಂಗ್ಲೆಂಡ್‌ ವಿರುದ್ಧ ಗೆಲ್ಲುವ ಸಾಮರ್ಥ್ಯ ಭಾರತ ತಂಡಕ್ಕಿದೆ ಎಂದಿರುವ ಅಖ್ತರ್‌, ಟೆಸ್ಟ್‌ ಕ್ರಿಕೆಟ್‌ನ ಜನಪ್ರಿಯತೆ ಈಗಾಗಲೇ ಸಂಕಷ್ಟದ ಸ್ಥಿತಿಯಲ್ಲಿ ಇದೆ. ಹೀಗಿರುವಾಗ 2 ದಿನಗಳಲ್ಲಿ ಟೆಸ್ಟ್‌ ಪಂದ್ಯ ಮುಗಿದರೆ ಟೆಸ್ಟ್‌ ಕ್ರಿಕೆಟ್‌ಗೆ ಇದು ಒಳಿತಲ್ಲ ಎಂದು ಹೇಳಿದ್ದಾರೆ. "ಇಂತಹ ಪಿಚ್‌ಗಳಲ್ಲಿ ಟೆಸ್ಟ್‌ ಪಂದ್ಯಗಳು ನಡೆಯಬೇಕೆ? ಖಂಡಿತಾ ಇಲ್ಲ. ಏಕೆಂದರೆ ಪಿಚ್‌ನಲ್ಲಿ ಚೆಂಡಿಗೆ ಅತಿಯಾದ ತಿರುವು ಸಿಗುತ್ತಿದೆ. ಹೀಗಾಗಿ ಕೇವಲ 2 ದಿನಗಳಲ್ಲಿ ಪಂದ್ಯ ಅಂತ್ಯಗೊಂಡಿದೆ. ಇದು ಟೆಸ್ಟ್‌ ಕ್ರಿಕೆಟ್‌ಗೆ ಒಳಿತಲ್ಲ. ಭಾರತ ತಂಡ ಇದಕ್ಕಿಂತಲೂ ದೊಡ್ಡದು ಮತ್ತು ಬಲಿಷ್ಠವಾದದ್ದು ಅಂದುಕೊಂಡಿದ್ದೆ. ನ್ಯಾಯಯುತ ಆಟ ಮತ್ತು ನ್ಯಾಯಯುತ ಪಿಚ್‌ಗಳ ಅಗತ್ಯವಿದೆ. ಅಂತಹ ಪಿಚ್‌ಗಳಲ್ಲೂ ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಹೆದರಿಕೊಳ್ಳುವ ಅಗತ್ಯವೇ ಇಲ್ಲ. ಈ ರೀತಿಯ ಪಿಚ್‌ಗಳನ್ನು ಒದಗಿಸುವ ಅಗತ್ಯ ಭಾರತ ತಂಡಕ್ಕಿಲ್ಲ," ಎಂದು ಅಖ್ತರ್ ತಮ್ಮ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. "ನ್ಯಾಯಯುತ ಪಿಚ್ ಮತ್ತು ಪರಿಸ್ಥಿತಿಗಳಲ್ಲಿ ಆಡಿ, ನೋಡಿ ನಾವು ತಾಯ್ನಾಡು ಮತ್ತು ವಿದೇಶ ಎರಡೂ ಕಡೆ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ತೋರಿಸಿಕೊಡಬೇಕು. ಈ ಸಂಗತಿ ಬಗ್ಗೆ ಭಾರತ ತಂಡ ಗಮನ ನೀಡಬೇಕಿದೆ. ಟೀಮ್ ಇಂಡಿಯಾ ಇದಕ್ಕಿಂತಲೂ ಬಲಿಷ್ಠವಾದದ್ದು. ಈ ರೀತಿಯ ಪಿಚ್‌ಗಳಲ್ಲಿ ಆಡುವ ಅಗತ್ಯವಿಲ್ಲ. ಪಂದ್ಯದ 3ನೇ ಮತ್ತು 4ನೇ ದಿನ ತವರಿನಂಗಣದ ಲಾಭ ಪಡೆಯುವುದರಲ್ಲಿ ಅರ್ಥವಿದೆ," ಎಂದಿದ್ದಾರೆ. "ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಸ್ಪರ್ಧಾತ್ಮಕ ಪಿಚ್‌ ನಿರೀಕ್ಷಿಸುತ್ತೇನೆ. ಮುಂದಿನ ಪಂದ್ಯಕ್ಕೆ ಶ್ರೇಷ್ಠ ಪಿಚ್‌ ಲಭ್ಯವಾಗುವಂತೆ ಭಾರತ ತಂಡ ನೋಡಿಕೊಳ್ಳಬೇಕು. ಭಾರತ ತಂಡಕ್ಕೆ ಪಂದ್ಯ ಗೆಲ್ಲಲು ಯಾವುದೇ ನೆರವಿನ ಅಗತ್ಯವಿಲ್ಲ. ಅಲ್ಲಿ ಇಳಿದು ಆಟವಾಡಿದರೆ ಸಾಕು, ಸರಣಿ ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ. ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ಅಂಗಣದಲ್ಲಿ ಸೋಲಿಸಿರುವ ಭಾರತ ತಂಡಕ್ಕೆ. ತವರಿನಲ್ಲಿ ವಿರುದ್ಧ ಗೆಲ್ಲುವುದು ದೊಡ್ಡ ಮಾತೇ ಅಲ್ಲ," ಎಂದು ಅಖ್ತರ್‌ ನುಡಿದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38itVh5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...