![](https://vijaykarnataka.com/photo/81323622/photo-81323622.jpg)
ಎಚ್.ಸಂದೀಪ ಜಗಳೂರು ಜಗಳೂರು: ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ರೈತರ ಸಾಲ ಮನ್ನಾ ಹಣದ ದುರುಪಯೋಗದ ಹಗರಣಗಳು ಕೇಳಿ ಬಂದಿದ್ದವು. ಈಗ ಸಹಕಾರಿ ಸಂಘದ ಕಾರ್ಯದರ್ಶಿಯೇ ಪೋರ್ಜರಿ ಸಹಿ ಮಾಡಿ ಮಾಡಿಕೊಂಡು ರೈತನ ಹೆಗಲ ಮೇಲೆ ಸಾಲ ಹೊರಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಜಿಲ್ಲಾಧಿಕಾರಿಯಿಂದ ಹಿಡಿದು ಸಹಕಾರಿ ಇಲಾಖೆ ಕಾರ್ಯದರ್ಶಿವರೆಗೂ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ. ತಾಲೂಕಿನ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಪ್ರಕರಣ ನಡೆದಿದ್ದು ಕಾರ್ಯದರ್ಶಿ ಕೃಷ್ಣಪ್ಪ ಎನ್ನುವವರ ವಿರುದ್ಧ ಆರೋಪ ಕೇಳಿ ಬಂದಿದೆ. ಗ್ರಾಮದ ಮಹಿಳೆ ವಿಜಯಮ್ಮ ಎಂಬುವವರು ಈ ಆರೋಪ ಮಾಡಿ ಸಹಕಾರ ಇಲಾಖೆ ಸೇರಿ ಪೊಲೀಸರಿಗೆ ಇವರ ವಿರುದ್ಧ ದೂರು ನೀಡಿದ್ದಾರೆ. ಫೋರ್ಜರಿ ಮಾಡಿ ಹಣ ಡ್ರಾ ಚಿಕ್ಕಮಲ್ಲನಹೊಳೆ ಗ್ರಾಮದ ರೈತ ಮಹಿಳೆ ವಿಜಯಮ್ಮ ಎಂಬುವರಿಗೆ ಸೇರಿದ ಸರ್ವೇ ನಂಬರ್ 60 ಹಿಸ್ಸಾ, ಪಿ1 ನ 4 ಎಕರೆ ಜಮೀನಿನ ದಾಖಲೆಯನ್ನು ನೀಡಿ, ಡಿಸಿಸಿ ಬ್ಯಾಂಕ್ ನಲ್ಲಿ ಇವರ ಹೆಸರಿನಲ್ಲಿ 2 ಖಾತೆಯನ್ನು ಸೃಜಿಸಲಾಗಿದೆ. ಒಂದು ಖಾತೆಯಲ್ಲಿ 15,000 ಸಾವಿರ ರೂ.ಹಾಗೂ ಇನ್ನೊಂದು ಖಾತೆಯಲ್ಲಿ ಒಂದು ಲಕ್ಷ ಹಣ ಸಾಲ ಮಂಜೂರು ಮಾಡಿಸಿದ್ದಾರೆ. ವಿಜಯಮ್ಮ ಅವರ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿಕೊಂಡು ಒಂದು ಖಾತೆಯಲ್ಲಿದ್ದ ಒಂದು ಲಕ್ಷ ಹಣ ಡ್ರಾ ಮಾಡಿದ್ದಾರೆ ಎಂದು ವಿಜಯಮ್ಮ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ವ್ಯವಸಾಯ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ತಾಲೂಕಿನ ತುಂಬರಗುದ್ದು, ಯರೇಹಳ್ಳಿ, ಚಿಕ್ಕಮಲ್ಲನಹೊಳೆ, ಕಮಂಡಲಗೊಂದಿ ಮಲ್ಲಾಪುರ ಹಳ್ಳಿಗಳು ಒಳಪಡುತ್ತಿವೆ. ಈ ಹಳ್ಳಿಯ ಅಮಾಯಕ ರೈತರಿಗೆ ಸಾಲ ಕೊಡುವುದಾಗಿ ಪಹಣಿ, ಆಧಾರ್ ಇನ್ನಿತರೆ ದಾಖಲೆ ಪಡೆದುಕೊಂಡು 50 ಸಾವಿರ ಸಾಲ ಮಂಜೂರು ಮಾಡಿಸಿ, ಇದರಲ್ಲಿ ರೈತರಿಗೆ ಕೇವಲ 12ರಿಂದ 20 ಸಾವಿರ ರೂ. ಮಾತ್ರ ನೀಡಿದ್ದಾರೆ. ಈ ಹಣವನ್ನು ಕೂಡ ಮೂರ್ನಾಲ್ಕು ಕಂತುಗಳಲ್ಲಿ ನೀಡುತ್ತಾರೆ ಎಂದು ರೈತರು ದೂರಿದ್ದಾರೆ. ಇಲ್ಲಿ ಇನ್ನೊಂದು ವಿಚಿತ್ರ ನಿಯಮವಿದೆ, ರೈತರು ಸಾಲ ಪಡೆಯುವಾಗಲೂ ಹಾಗೂ ಸಾಲವನ್ನು ನವೀಕರಣ ಮಾಡುವಾಗಲೂ ಖಾಲಿ ಚೆಕ್‌ಗಳಿಗೆ ಸಹಿ ಮಾಡಬೇಕು, ಇಲ್ಲದಿದ್ದರೆ ಸಾಲವೇ ಮಂಜೂರಾಗುವುದಿಲ್ಲ ಎಂಬ ಗಂಭೀರ ಆರೋಪ ರೈತರಿಂದ ಕೇಳಿಬಂದಿದೆ. ಈ ಎಲ್ಲ ಕುರಿತು ನ್ಯಾಯಕ್ಕಾಗಿ ಡಿಸಿಗೂ ಮನವಿ ಸಲ್ಲಿಸಿದ್ದಾರೆ. ಡಿಸಿ ಕಚೇರಿಯಿಂದ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕ್ರಮಕ್ಕೆ ಸೂಚನೆಯ ಪತ್ರ ಹಿಂದಿನ ತಿಂಗಳು ಫೆ.4ರಂದೇ ರವಾನೆ ಆಗಿದೆ. ಸಾಲ ನೀಡುವುದಾಗಿ ದಾಖಲೆ ತೆಗೆದುಕೊಂಡು ನನ್ನ ಹೆಸರಲ್ಲಿ 2 ಖಾತೆ ಸೃಷ್ಟಿಸಿ, ನನ್ನ ಸಹಿಯನ್ನು ಅವರೇ ಫೋರ್ಜರಿ ಮಾಡಿ ಒಂದು ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾರೆ. ಆ ಸಾಲದ ಹೊರೆ ನನ್ನ ಮೇಲೆ ಬಿದ್ದಿದೆ. ವಿಜಯಮ್ಮ, ವಂಚಿತ ರೈತ ಮಹಿಳೆ ಚಿಕ್ಕಮಲ್ಲನಹೊಳೆ ಚಿಕ್ಕನಮಲ್ಲನಹೊಳೆಯ ವಿಎಸ್‌ಎಸ್‌ಎನ್‌ನಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರದ ಬಗ್ಗೆ ದೂರು ಸಲ್ಲಿಕೆಯಾಗಿತ್ತು. ಪರಿಶೀಲಿಸಿ ಕ್ರಮ ವಹಿಸಲು ಸಹಕಾರ ಇಲಾಖೆಗೆ ಸೂಚನೆ ನೀಡಿ ಪತ್ರ ರವಾನಿಸಲಾಗಿದೆ. ಪೂಜಾರ್ ವೀರಮಲ್ಲಪ್ಪ, ಎಡಿಸಿ ಡಿಸಿಸಿ ಬ್ಯಾಂಕ್ ಕಡೆಗೂ ಬೊಟ್ಟು ! ಎರಡೆರಡು ಬ್ಯಾಂಕ್ ಖಾತೆ ಸೃಷ್ಟಿ ಮತ್ತು ಸಾಲ ಮಂಜೂರಾತಿ ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಎದ್ದಿದ್ದು ಡಿಸಿಸಿ ಬ್ಯಾಂಕ್ ಕಡೆಗೂ ಬೊಟ್ಟು ತಿರುಗಿದೆ. ಕೃಷಿ ಸಾಲಕ್ಕಾಗಿ ರೈತರು ಅಲೆದಾಡುವ ಹೊತ್ತಲ್ಲಿ ಒಬ್ಬರೇ ರೈತರಿಗೆ ಹೀಗೆ ಎರಡು ಖಾತೆ ತೆರೆದು ಹೇಗೆ ಸಾಲ ಮಂಜೂರು ಮಾಡಲಾಗುತ್ತದೆ. ಇಂತಹ ವ್ಯವಹಾರದ ಹಿಂದೆ ಇನ್ನು ಹಲವು ಕೈಗಳೂ ಇರಬಹುದಾ ಎಂಬ ಅನುಮಾನವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
from India & World News in Kannada | VK Polls https://ift.tt/3896oPs