ಹೊಸದಿಲ್ಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಡೇ ನೈಟ್ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಗಳಲ್ಲಿ ಮುಕ್ತಾಯವಾದ ಬೆನ್ನಲ್ಲೆ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಹಮದಾಬಾದ್ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಗೆದ್ದು ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದಿತ್ತು. "ಕೇವಲ ಎರಡೇ ದಿನಗಳಲ್ಲಿ ಮುಕ್ತಾಯವಾಗಿದ್ದರಿಂದ ಇದು ಟೆಸ್ಟ್ ಕ್ರಿಕೆಟ್ ಪಾಲಿಗೆ ಒಳ್ಳೆಯದಲ್ಲ. ಒಂದು ವೇಳೆ ಇಂತಹ ಪಿಚ್‌ಗಳಲ್ಲಿ ಅನಿಲ್ ಕುಂಬ್ಳೆ ಅಥವಾ ಹರಭಜನ್ ಸಿಂಗ್ ಬೌಲಿಂಗ್ ಮಾಡಿದ್ದರೆ, ಅವರಿಬ್ಬರೂ ಕ್ರಮವಾಗಿ 1000 ಹಾಗೂ 800 ವಿಕೆಟ್‌ಗಳನ್ನು ಕಬಳಿಸುತ್ತಿದ್ದರು," ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು. ಯುವರಾಜ್ ಸಿಂಗ್ ಅಭಿಪ್ರಾಯವನ್ನು ಕೆಲವು ಮಾಜಿ-ಹಾಲಿ ಆಟಗಾರರು ಒಪ್ಪಿಕೊಂಡರೆ, ಇನ್ನು ಕೆಲವರು ಸಹಮತ ಸೂಚಿಸಲಿಲ್ಲ. ಅದರಂತೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಕೂಡ ಯುವವರಾಜ್ ಅಭಿಪ್ರಾಯವನ್ನು ಅಲ್ಲಗೆಳೆದರು. ಪಿಚ್ ಹೊರತುಪಡಿಸಿ ಬೇರೆ ಕಾರಣಗಳಿಂದಲೂ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚಿನ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಹೇಳಿದರು. "ಹೌದು, ಇಂದಿನ ಪಿಚ್‌ಗಳು ವಿಭಿನ್ನವಾಗಿವೆ, ಆದರೆ ಡಿಆರ್‌ಎಸ್ ಇತ್ತೀಚಿನ ದಿನಗಳಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಒಂದು ವೇಳೆ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ ಬೌಲಿಂಗ್ ಮಾಡುತ್ತಿದ್ದ ವೇಳೆ ಡಿಆರ್‌ಎಸ್ ಇದ್ದಿದ್ದರೆ, ಇವರಿಬ್ಬರೂ ಕ್ರಮವಾಗಿ 1000 ಹಾಗೂ 700 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳುತ್ತಿದ್ದರು. ಇನ್‌ಸೈಡ್ ಎಡ್ಜ್ ಹಾಗೂ ಬ್ಯಾಟ್-ಪ್ಯಾಟ್ ನಡುವೆ ಡಿಆರ್‌ಎಸ್ ಪ್ರಧಾನ ಪಾತ್ರವನ್ನು ವಹಿಸುತ್ತಿತ್ತು," ಎಂದು ಗಂಭೀರ್ ಇಎಸ್‌ಪಿಎನ್ ಕ್ರಿಕ್‌ಇನ್ಪೋಗೆ ತಿಳಿಸಿದರು. ಅಹಮದಾಬಾದ್ ಪಿಚ್ ಸ್ಪಿನ್ ಸ್ನೇಹಿ ವಿಕೆಟ್ ಆಗಿರುವುದರಿಂದ ಇದು ಅಶ್ವಿನ್ ತಪ್ಪಲ್ಲ. ಆದರೆ, ಭಾರತೀಯ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳ ಮೇಲೆ ಸಾಕಷ್ಟು ಒತ್ತಡವಿರುತ್ತದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ 30 ವಿಕೆಟ್‌ಗಳ ಪೈಕಿ 28 ವಿಕೆಟ್‌ಗಳು ಕೇವಲ ಸ್ಪಿನ್ ಬೌಲಿಂಗ್‌ಗೆ ಉರುಳಿದ್ದವು. ಜೋಫ್ರ ಆರ್ಚರ್ ಹಾಗೂ ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಮಾತ್ರ ಕಿತ್ತಿದ್ದರು. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಇಬ್ಬರೂ ಇಂಗ್ಲೆಂಡ್ ತಂಡದ 19 ವಿಕೆಟ್‌ಗಳನ್ನು ಪಡೆದಿದ್ದರು. ಭಾರತದ ಪ್ರಥಮ ಇನಿಂಗ್ಸ್‌ನಲ್ಲಿ ಜೋ ರೂಟ್ ವೃತ್ತಿ ಜೀವನದ ಮೊದಲ 5 ವಿಕೆಟ್ ಸಾಧನೆ ಮಾಡಿದ್ದು ವಿಶೇಷವಾಗಿತ್ತು. "ಒಂದು ದೃಷ್ಟಿಕೋನದಿಂದ ನಾನು ಯುವರಾಜ್ ಸಿಂಗ್ ಅವರನ್ನು ಒಪ್ಪುತ್ತೇನೆ. ಆದರೆ ಈ ರೀತಿಯ ಪಿಚ್‌ಗಳಲ್ಲಿ ಆಡಿದ್ದ ದೃಷ್ಟಿಕೋನದಿಂದ ನಾನು ಒಪ್ಪುವುದಿಲ್ಲ. ಪಿಚ್ ಎಂದ ಮೇಲೆ ಎಲ್ಲರಿಗೂ ಒಂದೇ ರೀತಿ ಇರುತ್ತದೆ. ಇಂತಹ ವಿಕೆಟ್‌ಗಳೇ ಬೇಕೆಂದು ಅಶ್ವಿನ್ ಕೇಳಿರಲಿಲ್ಲ. ಇಂತಹ ವಿಕೆಟ್‌ಗಳನ್ನು ತಯಾರಿ ಮಾಡಿದ್ದರೆ, ಅಶ್ವಿನ್ ತುಂಬಾ ಒತ್ತಡಕ್ಕೆ ಒಳಗಾಗಿರುತ್ತಾರೆ," ಎಂದು ಗೌತಮ್ ಗಂಭೀರ್ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3b82W9O