ಬೆಂಗಳೂರು: ಕಳವು ಪ್ರಕರಣಗಳಲ್ಲಿ 10 ಮಂದಿ ಬಂಧನ; ₹1.8 ಕೋಟಿ ಮೌಲ್ಯದ ಚಿನ್ನಾಭರಣ ವಶ..!

: ನಗರದಲ್ಲಿ ಹಗಲಿನ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಪ್ರತ್ಯೇಕ ನಾಲ್ಕು ಪ್ರಕರಣಗಳನ್ನು ಭೇದಿಸಿ, ಹತ್ತು ಮಂದಿಯನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು, ಅವರಿಂದ 1.8 ಕೋಟಿ ರೂ, ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದು, ಮನೆಯ ಹಿಂಬಾಗಿಲು ಮೀಟಿ ನುಸುಳಿ ಚಿನ್ನಾಭರಣಗಳನ್ನು ದೋಚಿದ್ದ ಐದು ಮಂದಿಯನ್ನು ಬಂಧಿಸಿರುವ ಕೆಂಗೇರಿ ಗೇಟ್‌ ಉಪವಿಭಾಗದ ಪೊಲೀಸರು, ಅವರಿಂದ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಾಲ್ಮೀಕಿ ನಗರದ ಯಾಸೀನ್‌ ಖಾನ್‌ (35), ಖದೀರ್‌ ಅಹಮದ್‌ (25), ಶ್ಯಾಮಣ್ಣ ಗಾರ್ಡನ್‌ನ ಅಕ್ರಂಪಾಷ (32), ಹೆಗಡೆ ನಗರದ ಗೋಪಾಲ್‌ (36), ಕೈಲಾಶ್‌ (22) ಎಂಬುವರನ್ನು ಬಂಧಿಸಿ, 80 ಲಕ್ಷ ರೂ. ಮೌಲ್ಯದ 1.6 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. 2017ರ ಆಗಸ್ಟ್‌ನಲ್ಲಿಅನ್ನಪೂರ್ಣೇಶ್ವರಿ ನಗರದ ಬೀಗ ಹಾಕಿದ್ದ ಮನೆಯೊಂದಕ್ಕೆ ನುಗ್ಗಿದ ಖದೀಮರು, ಮನೆಯ ಹಿಂಬಾಗಿಲು ಮೀಟಿ ಮನೆಯೊಳಗೆ ನುಸುಳಿ 52 ಗ್ರಾಂ ಚಿನ್ನ, 1.6 ಕೆ.ಜಿ.ಬೆಳ್ಳಿ, ಏಳು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕರು ಕೆಂಗೇರಿ ಗೇಟ್‌ ಉಪವಿಭಾಗ ಪೊಲೀಸ್‌ ಠಾಣೆಯಲ್ಲಿ ನೀಡಿದ್ದ ದೂರನ್ನು ಆಧರಿಸಿ ಡಿಸಿಪಿ ಸಂಜೀವ್‌ ಪಾಟೀಲ್‌, ಆರೋಪಿಗಳ ಪತ್ತೆಗೆ ಒಂದು ವಿಶೇಷ ತಂಡ ರಚಿಸಿದ್ದರು. ಈ ತಂಡವು ಕಾರ್ಯಾಚರಣೆ ಕೈಗೊಂಡು 5 ಮಂದಿಯನ್ನು ಬಂಧಿಸಿದೆ ಎಂದು ವಿವರಿಸಿದರು.ಬಂಧಿತ ಆರೋಪಿಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ 6 ಪ್ರಕರಣಗಳು, ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ 3, ರಾಜರಾಜೇಶ್ವರಿ ನಗರದಲ್ಲಿ 2, ಬ್ಯಾಟರಾಯನಪುರ, ಚಂದ್ರ ಲೇಔಟ್‌ನ ಪೊಲೀಸ್‌ ಠಾಣೆಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು 13 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು. ಆರೋಪಿಗಳು ಗ್ಯಾಂಗ್‌ ಕಟ್ಟಿಕೊಂಡು ಹಗಲು ವೇಳೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಇಲ್ಲವೆ ಹಿಂಬಾಗಿಲನ್ನು ಮೀಟಿ ಒಳನುಗ್ಗಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದರು ಎಂದು ಅವರು ತಿಳಿಸಿದರು. ಇನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿ, ಅವರಿಂದ 17.21 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನೆಲಮಂಗಲದ ನರಸಿಂಹರೆಡ್ಡಿ (32), ದೀಪಾಂಜಲಿ ನಗರದ ರಾಕೇಶ್‌ (25) ಬಂಧಿತರು, ಆರೋಪಿಗಳಿಂದ 17.21 ಲಕ್ಷ ರೂ. ಮೌಲ್ಯದ 352 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಲ್‌ ಪಂತ್‌ ತಿಳಿಸಿದರು. ಆರೋಪಿಗಳು ಜನವರಿ 24ರಂದು ರಾಜರಾಜೇಶ್ವರಿ ನಗರದ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕರು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ರಾಜರಾಜೇಶ್ವರಿ ಠಾಣೆ ಪೊಲೀಸರು ಮತ್ತೊಂದು ಪ್ರಕರಣ ಭೇದಿಸಿದ್ದು, ಚಿನ್ನಾಭರಣ ಕಳವು ಮಾಡಿದ್ದವನನ್ನು ಬಂಧಿಸಿ, 5.35 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಮೂಲದ ಶ್ರೀನಿವಾಸ್‌ (25) ಬಂಧಿತ. ಆರೋಪಿ ರಾಜರಾಜೇಶ್ವರಿ ನಗರದ ಶಕ್ತಿಹಿಲ್‌ ರೆಸಾರ್ಟ್‌ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಎರಡು ಸೀರೆ ಅಂಗಡಿಗಳ ಬಾಗಿಲು ಮುರಿದು ನಾಲ್ಕು ಲಕ್ಷ ರೂ. ದೋಚಿ ಪರಾರಿಯಾಗಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೆ.ಆರ್‌. ಮಾರುಕಟ್ಟೆ ಠಾಣೆ ಪೊಲೀಸರು 4.5 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಭವಾನಿ ಸಿಂಗ್‌ (20), ಸುನೀಲ್‌ (18) ಬಂಧಿತರು. ಆರೋಪಿಗಳಿಂದ ಎರಡು ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 4.5 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಕಮಲ್‌ಪಂತ್‌ ವಿವರಿಸಿದರು. ಶ್ರೀ ಲಕ್ಷ್ಮೀ ಸೊಸೈಟಿ ಸಿಲ್ಕ್ಸ್‌ ಸೀರೆ ಅಂಗಡಿ ಮಾಲೀಕರು ಹಾಗೂ ಶ್ರೀ ಭವಾನಿ ಸಿಲ್ಕ್ಸ್‌ ಸೀರೆ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಕಳವು ನಡೆದಿರುವ ಬಗ್ಗೆ ಸಿಟಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಠಾಣಾ ಪೊಲೀಸರು ಗಸ್ತಿನಲ್ಲಿರುವಾಗ ಅಪರಿಚಿತರೊಬ್ಬರು ಕರೆ ಮಾಡಿ ಶ್ರೀ ಲಕ್ಷ್ಮೀ ಸೊಸೈಟಿ ಅಂಗಡಿ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರನ್ನು ನೋಡಿದ ಖದೀಮರು ಕಟ್ಟಡದಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ಕುಸಿದುಬಿದ್ದ ಭವಾನಿ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.


from India & World News in Kannada | VK Polls https://ift.tt/3bPhGJL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...