![](https://vijaykarnataka.com/photo/81342269/photo-81342269.jpg)
ಬೆಂಗಳೂರು: ಸದನದೊಳಗಡೆ ಶರ್ಟ್ ಬಿಚ್ಚಿ ಅಶಿಸ್ತು ಪ್ರದರ್ಶನ ಮಾಡಿದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಒಂದು ವಾರಗಳ ಕಾಲ ಅಮಾನತುಗೊಂಡಿದ್ದಾರೆ. ಆದರೆ ಅಮಾನತು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಪಡಿಸುತ್ತಿದ್ದು ಶುಕ್ರವಾರ ಸ್ಪೀಕರ್ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಕೆರಳಿಸಿದೆ. ಗುರುವಾರ ವಿಧಾನಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಯ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಕುಟುಂಬದ ಸದಸ್ಯರ ಮೇಲೆ ಅಟ್ರಾಸಿಟಿ ಹಾಗೂ ಕೊಲೆ ಯತ್ನ ದೂರು ದಾಖಲಿಸಿಕೊಳ್ಳಲಾಗಿದೆ. ಒಟ್ಟು 7 ಮಂದಿಯ ವಿರುದ್ಧ ದೂರು ದಾಖಲಾಗಿದೆ ಎಂದು ಸಂಗಮೇಶ್ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಡೆಯನ್ನು ಖಂಡಿಸಿ ಗಮನ ಸೆಳೆಯುವ ನಿಟ್ಟಿನಲ್ಲಿ ತಮ್ಮ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದ ಸದನದ ಶಿಸ್ತಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಗಮೇಶ್ ಅಮಾನತುಗೊಳಿಸಿ ಆದೇಶ ಮಾಡಿದರು. ಒಂದು ವಾರಗಳ ಕಾಲ ವಿಧಾನಸಭೆಯ ಸಭಾಂಗಣ ಪ್ರವೇಶ ಮಾಡದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆದೇಶದ ಬಳಿಕ ವಿಧಾನಸಭೆಗೆ ಪ್ರವೇಶ ಮಾಡಲು ಸಂಗಮೇಶ್ ಪ್ರಯತ್ನ ಮಾಡಿದರೂ ಮಾರ್ಷಲ್‌ಗಳು ಅವಕಾಶ ನೀಡಿಲ್ಲ. ಬಳಿಕ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ವಿಧಾನಸಭೆಯ ಒಳಗಡೆ ಪ್ರವೇಶ ದೊರಕಿಸಿಕೊಡಲು ಯಶಸ್ವಿ ಆದರು. ಆದರೆ ಸದನದ ಸಭಾಂಗಣಕ್ಕೆ ಬರಲು ಅವಕಾಶವನ್ನು ಮಾರ್ಷಲ್‌ಗಳು ನಿರಾಕರಿಸಿದರು. ಇದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದೆ. ಸದನದ ಬಾವಿಗೆ ಇಳಿದು ಗುರುವಾರ ಪ್ರತಿಭಟನೆ ನಡೆಸಿದ ಕಾರಣದಿಂದಾಗಿ ನಾಲ್ಕು ಬಾರಿ ಸದನವನ್ನು ಮುಂದೂಡಬೇಕಾಯಿತು. ಶುಕ್ರವಾರವೂ ಪ್ರತಿಭಟನೆ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಆದರೆ ಕಲಾಪ ಸಲಹಾ ಸಮಿತಿ ಸಭೆಯನ್ನು ಕರೆದು ಸಮಸ್ಯೆಯನ್ನು ಸರಿಪಡಿಸುವ ಸಾಧ್ಯತೆಗಳು ಅಲ್ಲಗಳೆಯುವ ಹಾಗಿಲ್ಲ. ಈ ನಿಟ್ಟಿನಲ್ಲಿ ಸ್ಪೀಕರ್ ಏನು ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
from India & World News in Kannada | VK Polls https://ift.tt/3sRGNSS