ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧನಾ ವಿದ್ಯಾರ್ಥಿಯೊಬ್ಬರು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಂಟರ್ ಆಫ್ ನ್ಯಾನೋ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್'ನಲ್ಲಿ ಸಂಶೋಧನೆ ಮಾಡುತ್ತಿದ್ದ ಉತ್ತರ ಭಾರತ ಮೂಲದ ರಣಧೀರ್ ಕುಮಾರ್(36) ಮೃತ ವ್ಯಕ್ತಿಯಾಗಿದ್ದು, ಮಂಗಳವಾರ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯಿಂದ ಹೊರಗೆ ಬಾರದ ಕಾರಣ ಉಳಿದವರು ಫೋನ್‌ನಲ್ಲಿ ಸಂಪರ್ಕಿಸಲು ಯತ್ನಿಸಿದ್ದಾರೆ. ನಂತರ ಕೊಠಡಿ ಬಳಿ ತೆರಳಿ ಬಾಗಿಲು ಬಡಿದಿದ್ದಾರೆ. ಈ ವೇಳೆಯೂ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ನೋಡಿದಾಗ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿಅಸಹಜ ಸಾವು ಕೇಸ್ ದಾಖಲಾಗಿದೆ. ವಿದೇಶದಲ್ಲಿ ಕೆಲಸ ಸಿಕ್ಕಿತ್ತು..! ಆತ್ಮಹತ್ಯೆಗೆ ಶರಣಾಗಿರುವ ರಣಧೀರ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಪಿಎಚ್‌ಡಿ ಅಂತಿಮ ವರ್ಷದಲ್ಲಿದ್ದ ರಣಧೀರ್‌ಗೆ ಮಾ.3ರಂದು ವೈವಾ ಇತ್ತು. ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದ ಕಾರಣ ಪಿಎಚ್‌ಡಿ ಮುಗಿಸುವ ಮೊದಲೇ ರಣಧೀರ್‌ಗೆ ನೆದರ್‌ಲೆಂಡ್ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ವಾರ್ಷಿಕ 24 ಲಕ್ಷ ರೂ. ವೇತನ ನಿಗದಿಯಾಗಿತ್ತು. ಮೇಲ್ನೋಟಕ್ಕೆ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ನಿಖರ ಕಾರಣ ಗೊತ್ತಾಗಿಲ್ಲ ಎಂದು ಐಐಎಸ್ಸಿ ಮೂಲಗಳು ತಿಳಿಸಿವೆ. ದಿನದ 24 ತಾಸು ತುರ್ತು ಸೇವೆ ಸಂಖ್ಯೆ ಆರಂಭಐಐಎಸ್ಸಿಯಲ್ಲಿರುವವರು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಅಂತಹವರ ನೆರವಿಗಾಗಿ ದಿನದ 24 ತಾಸುಗಳ ಕಾಲ ನೆರವಿಗೆ ಧಾವಿಸುವ ಸಹಾಯವಾಣಿ ಸಂಖ್ಯೆಯನ್ನು ಐಐಎಸ್ಸಿ ಆರಂಭಿಸಿದೆ. ಅಂತವರಿಗೆ ಕೌನ್ಸಿಲಿಂಗ್ ನೀಡಲಾಗುತ್ತದೆ. ಆನ್‌ಲೈನ್ ಮೂಲಕವೂ ಐಐಎಸ್ಸಿ ವಿದ್ಯಾರ್ಥಿಗಳು, ಸಿಬ್ಬಂದಿ ನೆರವು ಪಡೆಯಬಹುದು. ತಜ್ಞರ ಜೊತೆ ಕುಳಿತು ನೇರವಾಗಿ ಮಾತನಾಡಬಹುದು. ಅಲ್ಲದೇ ಒತ್ತಡ ನಿರ್ವಹಣೆಗಾಗಿ ಐಐಎಸ್ಸಿ ವೆಲ್‌ನೆಸ್ ಸೆಂಟರ್‌ನಲ್ಲಿ ಯೋಗ ಸೇರಿದಂತೆ ಇನ್ನಿತರ ತರಬೇತಿ ಮತ್ತು ಚರ್ಚೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಐಐಎಸ್ಸಿ ತಿಳಿಸಿದೆ.
from India & World News in Kannada | VK Polls https://ift.tt/3rsyehn