ಮೀನುಗಾರಿಕೆ ಬೋಟ್‌ಗೆ ಅಂಡರ್‌ ವಾಟರ್‌ ಗ್ಯಾರೇಜ್: ವಿಶಿಷ್ಟ ಪ್ರಯೋಗ ಮಾಡಿದ ಮಂಗಳೂರಿನ ಮೀನುಗಾರ!

ಸ್ಟೀವನ್‌ ರೇಗೊ ಮಂಗಳೂರು: ಮೀನುಗಾರಿಕೆಗೆ ತೆರಳಿದ ಬೋಟ್‌ಗಳಲ್ಲಿ ತೊಂದರೆಯಾದಾಗ ಬೋಟ್‌ನ್ನು ದಡಕ್ಕೆ ತಂದು ಸರಿಪಡಿಸಿ ಮತ್ತೆ ನೀರಿಗೆ ಇಳಿಸುವುದು ಇದುವರೆಗೆ ನಡೆದುಕೊಂಡು ಬರುತ್ತಿತ್ತು. ಆದರೆ ಬೋಟ್‌ ನೀರಿನಲ್ಲಿದ್ದಾಗಲೇ ತಾಂತ್ರಿಕ ಸಮಸ್ಯೆ ಎದುರಾದರೆ ಸ್ಕೂಬಾ ಡೈವ್‌ ಮೂಲಕ ಸರಿಪಡಿಸುವ ಕ್ರಮ ತೀರಾ ಹೊಸದು. ಮಂಗಳೂರಿನ ಬೋಟ್‌ ಮಾಲೀಕ ಕಂ ರಾಜರತ್ನ ಸನಿಲ್‌ ಈ ರೀತಿಯ ಅಂಡರ್‌ ವಾಟರ್‌ ಗ್ಯಾರೇಜ್‌ ಪರಿಕಲ್ಪನೆಯನ್ನು ಹೊರ ಜಗತ್ತಿಗೆ ತಿಳಿಸಿಕೊಟ್ಟವರು. ಅಂಡರ್‌ ವಾಟರ್‌ ಗ್ಯಾರೇಜ್‌ ಮಂಗಳೂರಿನ ಹಳೆ ಬಂದರಿನಲ್ಲಿ ಜ.9ರಿಂದ ಆರಂಭವಾಗಿದೆ. ಮೊದಲ ದಿನವೇ ಬೋಟ್‌ನ ಸಮಸ್ಯೆಯನ್ನು ಸಮರ್ಥವಾಗಿ ಬಗೆಹರಿಸುವ ಮೂಲಕ ಇದು ಸಕ್ಸಸ್‌ಫುಲ್‌ ಎಂದು ತೋರಿಸಿಕೊಟ್ಟಿದ್ದಾರೆ. ರಾಜರತ್ನ ಸನಿಲ್‌ ಹೇಳುವಂತೆ ನಮ್ಮ ತಂಡದಲ್ಲಿ ಮತ್ತಿಬ್ಬರು ಸದಸ್ಯರಿದ್ದಾರೆ. ಈಗಾಗಲೇ ನಮ್ಮ ತಂಡ ಮುಂಬಯಿಯಲ್ಲಿ ತರಬೇತಿ ಪಡೆದುಕೊಂಡಿದೆ. ಲಾಕ್‌ಡೌನ್‌ ಸಮಯದಲ್ಲಿ ಮಂಗಳೂರು ಹಳೆ ಬಂದರಿನಲ್ಲಿ ಇದನ್ನು ಚಾಲ್ತಿಗೆ ತರಲಾಯಿತು. ಸಹೋದ್ಯೋಗಿ ಸಚಿನ್‌ ನೆರವಿನಿಂದ ಈಗ ಪೂರ್ಣರೂಪದಲ್ಲಿ ಇದು ಕೆಲಸ ಮಾಡುತ್ತಿದೆ ಎನ್ನುತ್ತಾರೆ. ದೊಡ್ಡ ಖರ್ಚಿಲ್ಲ ಮೀನುಗಾರಿಕೆಗೆ ಹೋದಾಗ ನೀರಿನಲ್ಲಿ ಬೋಟ್‌ ತಾಂತ್ರಿಕ ಸಮಸ್ಯೆಗೆ ಒಳಗಾಗುವುದು ಮಾಮೂಲಿ. ಈ ಸಂದರ್ಭ ಬೋಟನ್ನು ದಡಕ್ಕೆ ತರಬೇಕಾಗುತ್ತದೆ. ಕೆಲವೊಂದು ಸಲ ಹೆಚ್ಚು ಖರ್ಚು ಕೂಡ ಮಾಡಬೇಕಾಗುತ್ತದೆ. ಒಂದೇ ದಿನದಲ್ಲಿ ರಿಪೇರಿ ಮಾಡುವುದು ಕೂಡ ಕಷ್ಟ. ಆದರೆ ಸ್ಕೂಬಾ ಡೈವಿಂಗ್‌ ಮೂಲಕ ಅಷ್ಟೊಂದು ಖರ್ಚು ತಗಲುವುದಿಲ್ಲ. ಸ್ಕೂಬಾ ಡೈವಿಂಗ್‌ ತಂಡ ಅಗತ್ಯ ಧಿರಿಸು ಹಾಕಿಕೊಂಡು, ಆಕ್ಸಿಜನ್‌ ಸಿಲಿಂಡರ್‌ ಜತೆಗೆ ನೀರಿನಲ್ಲಿದ್ದ ಬೋಟ್‌ನ ಆಳಕ್ಕೆ ಇಳಿದು ಏನಾದರೂ ಸಮಸ್ಯೆ ಇದೆಯಾ ಎನ್ನುವುದನ್ನು ಪರೀಕ್ಷೆ ಮಾಡಲು ಸಾಧ್ಯವಿದೆ. ಮುಖ್ಯವಾಗಿ ನೀರಿನ ಆಳ ಸ್ವಚ್ಛವಾಗಿದ್ದರೆ ಸುಲಭದಲ್ಲಿ ಕೆಲಸ ಮಾಡಬಹುದು. ಆದರೆ ಸಮುದ್ರದಲ್ಲಿ ಅಲೆ, ಸ್ವಚ್ಛತೆ ಸ್ವಲ್ಪ ಕಷ್ಟ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲದೇ ಬೋಟ್‌ನ ದುರಸ್ತಿ ಮಾಡಬಹುದು ಎನ್ನುತ್ತಾರೆ ಸನಿಲ್‌. ಪ್ರಸ್ತುತ ಕರ್ನಾಟಕದಲ್ಲಿ ಪರಿಚಯ ಮಾಡಿದ್ದೇವೆ. ಮುಂದೆ ಕೇರಳ, ಗೋವಾದಲ್ಲೂ ಇದನ್ನು ಅಳವಡಿಸುವ ಯೋಜನೆ ಇಟ್ಟುಕೊಂಡಿದ್ದೇವೆ. ಕರಾವಳಿಯಲ್ಲಿ ಯಾರಾದರೂ ಬೋಟ್‌ ಮಾಲೀಕರಿಗೆ ಈ ವಿಚಾರದ ಕುರಿತು ಲೈವ್‌ ನೀಡುವ ಕುರಿತು ಚಿಂತನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಸನಿಲ್‌. ಮೀನುಗಾರಿಕಾ ಬೋಟ್‌ನ ಅಡಿ ಭಾಗದಲ್ಲಿ ಹೆಚ್ಚಾಗಿ ಕಪ್ಪೆ ಚಿಪ್ಪುಗಳು ಮುತ್ತಿಕೊಂಡಿರುತ್ತದೆ. ಅಲ್ಲಿನ ಲೋಹದ ಪ್ರೊಫೆಲ್ಲರ್‌ ಮತ್ತು ಅಡಿಭಾಗದಲ್ಲಿರುವ ಪದರಕ್ಕೆ ಚಿಪ್ಪುಗಳು ಅಂಟಿಕೊಂಡರೆ ಸಮುದ್ರದಲ್ಲಿ ಬೋಟ್‌ ಮುಂದಕ್ಕೆ ಸಾಗುವುದು ಕಷ್ಟ. ಜತೆಗೆ ಡೀಸೆಲ್‌ ಹೆಚ್ಚು ಖರ್ಚಾಗುತ್ತದೆ. ಈಗಿನ ಸ್ಕೂಬಾ ಡೈವರ್‌ಗಳಿಂದ ರಿಪೇರಿ ಮಾಡುವ ಕಲ್ಪನೆ ಉತ್ತಮ. ರಮೇಶ್‌ ಬಂಗೇರ, ಬೋಟು ಮಾಲೀಕ ಸಾಮಾನ್ಯ ಈಜುಗಾರರಿಗೆ ಈ ರೀತಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನೀರಿನ ಅಡಿಭಾಗದಲ್ಲಿ ಸುಮಾರು ಹೊತ್ತು ನಿಲ್ಲಬೇಕಾದರಿಂದ ಕೆಲಸಗಾರರಿಗೆ ಸೂಕ್ತ ತರಬೇತಿ ಅಗತ್ಯ. ಈಗಾಗಲೇ ಐದಾರು ಮಂದಿಗೆ ತರಬೇತಿ ನೀಡಿದ್ದೇನೆ. ಸರಿಸುಮಾರು ಆರು ತಿಂಗಳ ತರಬೇತಿಯ ಬಳಿಕವೇ ಅವರನ್ನು ಸ್ಕೂಬಾ ಡೈವಿಂಗ್‌ ಮಾಡಲು ಕಳುಹಿಸಬಹುದು. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಒಂದೆರಡು ತಾಸಿನಲ್ಲಿ ಬಗೆಹರಿಸಬಹುದು. ದೊಡ್ಡ ತಾಂತ್ರಿಕ ಸಮಸ್ಯೆಗಳು ಬಂದರೆ ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ರಾಜರತ್ನ ಸನಿಲ್‌, ಬೋಟ್‌ ಮಾಲೀಕ/ಮೀನುಗಾರ, ಮಂಗಳೂರು


from India & World News in Kannada | VK Polls https://ift.tt/3i8Yj0L

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...