
ಬೇಗೂರು: ಕಾಡಂಚಿನ ಗ್ರಾಮಗಳಲ್ಲಿ ನುಗ್ಗುತ್ತಿರುವ ಕಾಡಾನೆಗಳು ಈಗ ಜಮೀನಿನಲ್ಲಿರುವ ಮನೆಗಳಿಗೂ ನುಗ್ಗಿ ದವಸ ಧಾನ್ಯಗಳನ್ನು ತಿಂದು ತೇಗಿ, ಮನೆಯನ್ನು ಧ್ವಂಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲಿನ ಹೊಸಪುರ ಗ್ರಾಮದ ಹೊರವಲಯದಲ್ಲಿ ಸೋಮವಾರ ರಾತ್ರಿ ಮಹದೇವ ಚಾರಿ ಎಂಬುವರಿಗೆ ಸೇರಿದ ಜಮೀನಿನ ಮನೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಕಾಡಾನೆಗಳು ಮನೆಯನ್ನು ಪೂರ್ತಿ ಧ್ವಂಸ ಮಾಡಿ, ಅಲ್ಲಿದ್ದ ರಾಗಿ ತೆನೆ, ದವಸವನ್ನು ಮನಸೋ ಇಚ್ಛೆ ಸೇವಿಸಿ ತೆರಳಿವೆ. ಮಳೆ ಹೆಚ್ಚಾದ ಕಾರಣ ಮಹದೇವಚಾರಿಯವರು 4-5 ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ಕಟಾವು ಮಾಡಿ ಜಮೀನಿನ ಮನೆಯಲ್ಲಿ ಸಂಗ್ರಹಿಸಿದ್ದರು. ಆದರೆ, ಓಂಕಾರ ಅರಣ್ಯ ವಲಯದದಿಂದ ಆಹಾರ ಅರಸಿ ಬಂದ ಕಾಡಾನೆಗಳು ಇದರ ವಾಸನೆ ಹಿಡಿದು ಮನೆಗೆ ನುಗ್ಗಿವೆ. ಕಾಡಂಚಿನ ಗ್ರಾಮಗಳ ಜಮೀನುಗಳಿಗೆ ಕಾಡಾನೆಗಳು ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿಯಲ್ಲಿ ನಿದ್ರೆ ಇಲ್ಲದೆ ಕಾಡಾನೆಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಬೇಕಿದೆ. ಹೀಗೆ ಕಷ್ಟಪಟ್ಟು ರಕ್ಷಣೆ ಮಾಡಿದ ಮನೆಗಳಲ್ಲಿ ಸಂಗ್ರಹಿಸಿಟ್ಟರೂ ಅಲ್ಲಿಗೂ ಆನೆಗಳು ದಾಳಿ ಮಾಡುತ್ತಿವೆ. ಇದರಿಂದ ಅನ್ನದಾತರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಂದಕದಲ್ಲಿ ಮಣ್ಣು ತೆಗೆಸಿ ಆನೆಗಳು ನಾಡಿನತ್ತ ಬರದಂತೆ ನೋಡಿಕೊಳ್ಳಬೇಕು. ರಾತ್ರಿ ವೇಳೆ ಹೆಚ್ಚು ಗಸ್ತು ತಿರುಗಬೇಕು ಎಂದು ಮನವಿ ಮಾಡಿರುವ ರೈತರು, ಇದೇ ರೀತಿ ಕಾಡಾನೆಗಳ ಹಾವಳಿ ಹೆಚ್ಚಾದರೆ ಅರಣ್ಯ ಇಲಾಖೆಯ ಕಚೇರಿಯ ಬಳಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
from India & World News in Kannada | VK Polls https://ift.tt/3bASisC