
ಶಿವಮೊಗ್ಗ: ಪಕ್ಷ ಸಂಘಟನೆ ಹಾಗೂ ಮುಂದಿನ ಕಾರ್ಯಯೋಜನೆ ರೂಪುಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ. ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆ ಕೂಡಾ ನಡೆದಿದೆ. ಸಭೆಯಲ್ಲಿ ಪಕ್ಷದ ಆಂತರಿಕ ಹಲವು ವಿಚಾರಗಳು ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಇದೆ. ಸಂಪುಟ ವಿಸ್ತರಣೆ, ಪಕ್ಷದ ಮುಂದಿನ ಕಾರ್ಯಯೋಜನೆ, ಆಂತರಿಕ ಭಿನ್ನಮತದ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಇದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಭಾಗಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ಕಾರ್ಯಕಾರಿಣಿ ಸಭೆ ಭಾನುವಾರ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಅವರು ಭಾಗಿಯಾಗಲಿದ್ದಾರೆ. ಜೊತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಪಕ್ಷದ ರಾಜ್ಯ ಪದಾಧಿಕಾರಿಗಳು, ಪ್ರಕೋಷ್ಠಗಳ ಸಂಚಾಲಕರು, ಜಿಲ್ಲಾಧ್ಯಕ್ಷರು, ವಿಭಾಗ ಪ್ರಭಾರಿಗಳು ಕೂಡಾ ಭಾಗಿಯಾಗಲಿದ್ದಾರೆ. ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶವೂ ಪ್ರಕಟಗೊಂಡಿದ್ದು ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಹಾಗೂ ತಳಪಟ್ಟದಲ್ಲಿ ಪಕ್ಷದ ಕಾರ್ಯಕ್ರಮದ ಬಗ್ಗೆ ಜನರಿಗೆ ತಲುಪಿಸುವುದು ಹಾಗೂ ಕಾರ್ಯಯೋಜನೆಗಳನ್ನು ಜಾರಿಗೊಳಿಸುವ ವಿಚಾರವಾಗಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
from India & World News in Kannada | VK Polls https://ift.tt/3b95ZyV