
ಹೊಸದಿಲ್ಲಿ: ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ಮುಂಚೂಣಿ ಸೇನಾ ನೆಲೆಗಳಿಗೆ, ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಭೇಟಿ ನೀಡಿದ್ದಾರೆ. ನಿನ್ನೆ(ಜ.02-ಶನಿವಾರ) ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಿದ ರಾವತ್, ಪೂರ್ವ ವಲಯದಲ್ಲಿ ಭಾರತದ ಒಟ್ಟಾರೆ ಭದ್ರತಾ ಸನ್ನಿವೇಶವನ್ನು ಪರಿಶೀಲನೆ ನಡೆಸಿದರು. ಭಾರತೀಯ ಸೇನೆ, ಐಟಿಬಿಪಿ ಮತ್ತು ವಿಶೇಷ ಫ್ರಾಂಟಿಯರ್ ಫೋರ್ಸ್ (ಎಸ್‌ಎಫ್‌ಎಫ್)ನ ಸೈನಿಕರೊಂದಿಗೆ ಸಂವಹನ ನಡೆಸಿದ ಬಿಪಿನ್ ರಾವತ್, ಹಲವು ಮುಂಚೂಣಿ ವಾಯುನೆಲೆಗಳಿಗೂ ಭೇಟಿ ನೀಡಿ ಗಮನ ಸೆಳೆದರು. ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಮತ್ತು ಲೋಹಿತ್ ಸೆಕ್ಟರ್ ಸೇರಿದಂತೆ ಹಲವು ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಿದ ರಾವತ್, ಭದ್ರತಾ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಲಡಾಖ್ ಗಡಿಯಲ್ಲಿ ಚೀನಾದೊಂದಿಗಿನ ಸುದೀರ್ಘ ಸಂಘರ್ಷದಿಂದಾಗಿ, ಪೂರ್ವದ ಗಡಿಯಲ್ಲೂ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ, ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಬದೌರಿಯಾ ಹಲವು ಬಾರಿ ಪೂರ್ವದ ಗಡಿಗಳಿಗೆ ಭೇಟಿ ನೀಡಿದ್ದಾರೆ. ಇದೀಗ ಖುದ್ದು ರಕ್ಷಣಾ ಸಿಬ್ಬಂದಿ ಮಖ್ಯಸ್ಥ ಬಿಪಿನ್ ರಾವತ್ ಪೂರ್ವದ ಗಡಿಯ ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಿರುವುದು ಭಾರೀ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/3546NkO