ಟಿ.ಶಿವರಾಜ್ ಬಿಡದಿ: ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ವಿಲೇವಾರಿಗೆ ಸೂಕ್ತ ಜಾಗದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬಿಡದಿ ಪಟ್ಟಣ ಹೊರತುಪಡಿಸಿ ಬೇರೆ ಕಡೆ ಕಸ ಎತ್ತುವ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಇದರಿಂದ ಬಹುತೇಕ ಎಲ್ಲಾ ವಾರ್ಡುಗಳಲ್ಲಿ ಕಸದ ರಾಶಿಗಳು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ದುರ್ನಾತ ಬೀರುತ್ತಿವೆ. ಕಸದ ರಾಶಿಗಳಿಂದ ಬರುವ ದುರ್ವಾಸನೆ ಮತ್ತು ನೊಣಗಳು ಹಾವಳಿಯಿಂದ ಬೇಸತ್ತಿರುವ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆಯಲ್ಲಿ ಅನಾಯಕತ್ವ ಇದೇ ನವೆಂಬರ್ 5 ರಂದು ಬಿಡದಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಳೆದ 21 ತಿಂಗಳಿಂದ ಖಾಲಿಯಾಗಿದ್ದ ಕುರ್ಚಿಗಳು ಭರ್ತಿಯಾಗಿದ್ದವು. ಪುರಸಭೆಗೆ ಹೊಸ ಆಡಳಿತ ಮಂಡಳಿ ಬಂದ ನಂತರ ಬಿಕೋ ಎನ್ನುತ್ತಿದ್ದ ಕಾರ್ಯಾಲಯ ಚಟುವಟಿಕೆಯಿಂದ ಕೂಡಿತ್ತು. ಆದರೆ ಇತ್ತೀಚೆಗೆ ರಾಜ್ಯ ಹೈಕೋರ್ಟ್ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಹಾಗೂ ಮೀಸಲು ಪಟ್ಟಿಯನ್ನು ಅಸಿಂಧುಗೊಳಿಸಿದ ಹಿನ್ನೆಲೆಯಲ್ಲಿ ಆಡಳಿತದ ಹುರುಪು ಹೆಚ್ಚು ದಿನ ಉಳಿಯಲಿಲ್ಲ. ಹೀಗಾಗಿ ಪುರಸಭೆ ಅಧಿಕಾರ ಮತ್ತೆ ಸೂತ್ರ ಹರಿದ ಗಾಳಿ ಪಟದಂತಾಗಿದೆ. ಗಬ್ಬು ನಾರುವ ವಾರ್ಡ್‌ಗಳು ಬಿಡದಿ ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡುಗಳಲ್ಲಿ ಸುಮಾರು ಒಂದು ವಾರಕ್ಕೂ ಹೆಚ್ಚು ಸಮಯದಿಂದ ಕಸ ವಿಲೇವಾರಿ ನಿಂತಿದೆ. ಚರಂಡಿಗಳು ಸ್ವಚ್ಛತೆಯಿಲ್ಲದೆ ದುರ್ವಾಸನೆ ಬೀರುತ್ತಿವೆ. ಕೆಲವೆಡೆ ಯುಜಿಡಿ ಸಂಪರ್ಕ ಬ್ಲಾಕ್ ಆಗಿದ್ದು ಮಾನ್‌ಹೋಲ್ ತುಂಬಿ ರಸ್ತೆಯಲ್ಲೆಲ್ಲಾ ಮಲೀನ ನೀರು ಹರಿಯುತ್ತಿವೆ. ಇವುಗಳ ದುಷ್ಪರಿಣಾಮವನ್ನು ಅನುಭವಿಸಲಾಗದೆ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ಗಮನ ಸೆಳೆದರೂ ಯಾವ ಪ್ರಯೋಜನವಾಗುತ್ತಿಲ್ಲ. ಶಾಶ್ವತ ಪರಿಹಾರವೇ ಇಲ್ಲ ಪುರಸಭೆ ಸಹರದ್ದಿನಲ್ಲಿ ಪ್ರತಿದಿನ ಸುಮಾರು 10 ಟ್ರಾಕ್ಟರ್‌ಗೂ ಹೆಚ್ಚು ಕಸ ಸಂಗ್ರಹವಾಗುತ್ತಿದ್ದು, ಈ ಕಸವನ್ನು ಒಪ್ಪಂದದ ಮೇರೆಗೆ ಹಲವಾರು ವರ್ಷಗಳಿಂದ ಖಾಸಗಿಯವರ ಜಮೀನಿನಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಒಪ್ಪಂದದ ಕರಾರು ಅವಧಿ ಮುಕ್ತಾಯಗೊಂಡ ನಂತರ ಪುರಸಭೆ ಸಿಬ್ಬಂದಿ ಕದ್ದುಮುಚ್ಚಿ ಹಳ್ಳ-ಕೊಳ್ಳಗಳು, ರಸ್ತೆಬದಿಯಲ್ಲಿ ವಿಲೆವಾರಿ ಮಾಡುತ್ತಿದ್ದಾರೆ. ನಿತ್ಯ ಉತ್ಪತ್ತಿಯಾಗುತ್ತಿರುವ ದೊಡ್ಡ ಪ್ರಮಾಣದ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗದೆ ಪುರಸಭೆ ಅಧಿಕಾರಿಗಳು ಈಗ ಕೈಕಟ್ಟಿ ಕುಳಿತಿದ್ದಾರೆ. 10 ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿ ಇನ್ನು ಪುರಸಭೆ ಬಹುತೇಕ ವಾರ್ಡುಗಳಲ್ಲಿ ಚರಂಡಿಗಳು ಕಟ್ಟಿಕೊಂಡಿದ್ದು ಸಿಬ್ಬಂದಿ ಸ್ವಚ್ಛಗೊಳಿಸುವ ಗೋಜಿಗೆ ಹೋಗಿಲ್ಲ. ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ಗಬ್ಬು ವಾಸನೆ ಬೀರುತ್ತಿವೆ. ಪುರಸಭೆಯಲ್ಲಿ ಜನರ ಸಮಸ್ಯೆ ಕೇಳುವವರಿಲ್ಲ ಎಂದು ನಾಗರಿಕರು ದೂರುತ್ತಾರೆ. ಆದರೆ ಪುರಸಭೆ ವ್ಯಾಪ್ತಿಯ ಜನಸಂಖ್ಯೆ 50 ಸಾವಿರ ದಾಟಿದೆ. ಪ್ರತಿದಿನ 10 ಟನ್‌ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದೆ. ಈ ಕಸವನ್ನು ನಾವು ಎಲ್ಲಿ ಸಂಸ್ಕರಣೆ ಮಾಡಬೇಕು? ಎನ್ನವುದು ಅಧಿಕಾರಿಗಳ ವಾದ. ರೈಲು ನಿಲ್ದಾಣದ ಹತ್ತಿರ ಡಂಪ್ ಬಿಡದಿ ಪಟ್ಟಣದಲ್ಲಿನ ಕಸವನ್ನು ಸದ್ಯ ರೈಲ್ವೆ ನಿಲ್ದಾಣದ ಸಮೀಪ ಸುರಿಯಲಾಗುತ್ತಿದೆ. ಬೇರೆ ಕಡೆ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯಾಗದ ಕಾರಣ ಸಮಸ್ಯೆ ಪೆಡಂಭೂತವಾಗಿ ಬೆಳೆದು ನಿಂತಿದೆ. ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸರಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಈವರೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸುಮಾರು ಮೂರು ದಶಕಗಳಿಂದ ಬಿಡದಿಯ ಜನಸಾಮಾನ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ಸಲ್ಲಿಸಿರುವ ನಿರಂತರ ಕೋರಿಕೆಗಳನ್ನು ಬುಟ್ಟಿಗೆಸೆದಿರುವ ಸರಕಾರಿ ಅಧಿಕಾರಿಗಳು ತಮ್ಮ ತಾತ್ಸಾರವನ್ನು ಮುಂದುವರೆಸಿದ್ದಾರೆ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿ ಸಮಸ್ಯೆಗೆ ಬಹಳ ವರ್ಷಗಳಿಂದ ಪರಿಹಾರವೇ ಸಿಕ್ಕಿಲ್ಲ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತದ ಸಹಿತ, ಪುರಸಭೆ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳು ವಿಫಲರಾಗಿದ್ದಾರೆ. ಸಾರ್ವಜನಿಕರಿಂದ ಕಂದಾಯ ವಸೂಲು ಮಾಡುವ ಸರಕಾರ ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕೆ ಜಾಗ ನಿಗದಿ ಮಾಡುವಂತೆ ಕಸ ಸಂಸ್ಕರಣೆಗೂ ಸ್ಥಳವನ್ನು ಮೀಸಲಿರಿಸಬೇಕು. ನವೀನ್, ಬಿಡದಿ ನಿವಾಸಿ ಬಿಡದಿ ಪುರಸಭೆಯಲ್ಲಿ ಹೊಸ ಅಧ್ಯಕ್ಷರು ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡ ಕೆಲ ದಿನಗಳು ಸಮಸ್ಯೆ ಇರಲಿಲ್ಲ. ಇದೀಗ ಮತ್ತೆ ತ್ಯಾಜ್ಯ ವಿಲೇವಾರಿ ಸಮಸ್ಯೆ ತಲೆದೂರಿದೆ. ರಸ್ತೆ ಬದಿ ರಾಶಿ ಇರುವ ಕಸ ತೆಗೆಯುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಆದರೂ ಕ್ರಮವಹಿಸಿಲ್ಲ. ಈ ವಿಷಯವನ್ನು ಹಿರಿಯ ಅಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತರುತ್ತೇನೆ. ಸಿ.ಲೋಕೇಶ್, ಪುರಸಭೆ ಸದಸ್ಯರು
from India & World News in Kannada | VK Polls https://ift.tt/371T7Xw