ಬೆಂಗಳೂರು: ಸಂಪುಟ ವಿಸ್ತರಣೆ ವಿಳಂಬ ಹಾಗೂ ಹೈಕಮಾಂಡ್ ನಡೆಯಿಂದ ಬೇಸೆತ್ತಿರುವ ಸಿಎಂ ಇದೀಗ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ತಮ್ಮ ಆಪ್ತರಿಗೆ ನೀಡುವ ಮೂಲಕ ಸಡ್ಡು ಹೊಡೆದಿದ್ದಾರೆ. ಬುಧವಾರ 20 ಕ್ಕೂ ಹೆಚ್ಚು ನಿಗಮ ಮಂಡಳಿಯ ಅಧ್ಯಕ್ಷರನ್ನು ನೇಮಕ ಮಾಡಿದ ಬಿಎಸ್‌ವೈ ಬಹುತೇಕ ಆಪ್ತರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಿಎಸ್‌ವೈ ಬೀಗರಾದ ಎಸ್.ಐ ಚಿಕ್ಕನಗೌಡರಿಗೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಆಪ್ತರಾದ ಎಂ. ರುದ್ರೇಶ್ ಅವರನ್ನು ಕೆಆರ್‌ಐಡಿಎಲ್‌ಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಸ್‌ಆರ್ ವಿಶ್ವನಾಥ್ ಅವರನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಷ್ಟೇ ಅಲ್ಲ ವಿಜಯೇಂದ್ರ ಆಪ್ತರಾದ ತಮ್ಮೇಶ ಗೌಡ ಅವರನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹೀಗೆ 20 ನಿಗಮಗಳ ಪೈಕಿ ಬಹುತೇಕ ಬಿಎಸ್‌ವೈ ಆಪ್ತರಿಗೆ ಮಣೆ ಹಾಕಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ರಾಜ್ಯ ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರ ನಡುವಿನ ಶೀತಲ ಸಮರ ತೀವ್ರಗೊಳ್ಳುತ್ತಿದೆ. ವಲಸಿಗರಿಗೆ ಬಿಎಸ್‌ವೈ ಹೆಚ್ಚಿನ ಮಣೆ ಹಾಕುತ್ತಾರೆ ಎಂಬುವುದು ಮೂಲ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ಸಂಪುಟ ವಿಸ್ತರಣೆ ಹಾಗೂ ಬಿಎಸ್‌ವೈಯನ್ನು ನಡೆಸಿಕೊಳ್ಳುತ್ತಿರುವ ಹೈಕಮಾಂಡ್ ನಡೆ ಬಿಎಸ್‌ವೈ ಆಪ್ತರನ್ನು ಕೆರಳಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಆಪ್ತರಿಗೆ ನೀಡುವ ಮೂಲಕ ಬಿಎಸ್‌ವೈ ಸಡ್ಡು ಹೊಡೆದಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
from India & World News in Kannada | VK Polls https://ift.tt/2UX2hyL