ಬೆಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಮತದಾರರ ಮಿಂಚಿನ ನೋಂದಣಿ ಅವಧಿಯನ್ನು ಜ. 10ರವರೆಗೆ ವಿಸ್ತರಿಸಲಾಗಿದೆ. 18 ವರ್ಷ ತುಂಬಿದ ಯುವಕ, ಯುವತಿಯರು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್, ಸಾಮಾನ್ಯ ಸೇವಾ ಕೇಂದ್ರಗಳು, ವಾರ್ಡ್ ಕಚೇರಿಗಳು, ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಎಲ್ಲಮತಗಟ್ಟೆ ಕೇಂದ್ರಗಳು, ವಸತಿ ಸಮುಚ್ಛಯಗಳು, ಕಾಲೇಜುಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಜ. 6ರಿಂದ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9.30 ರಿಂದ ಸಂಜೆ 6ರವರೆಗೆ ಎಲ್ಲೆಡೆ ನೋಂದಣಿ ಅಭಿಯಾನ ನಡೆಯುತ್ತಿದೆ. ಮತಗಟ್ಟೆ ಅಧಿಕಾರಿಗಳು 2020ರ ಕರಡು ಭಾವಚಿತ್ರವುಳ್ಳ ಮತದಾರರ ಪಟ್ಟಿ ಮತ್ತು ಕೈಬಿಟ್ಟಿರುವ ಮತದಾರರ ವಿವರಗಳೊಂದಿಗೆ ಮತಗಟ್ಟೆ ಕೇಂದ್ರಗಳಲ್ಲಿ ಹಾಜರಿರುತ್ತಾರೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ತಮ್ಮ ಹೆಸರು ಮತ್ತು ಇತರೆ ವಿವರಗಳು ಮತದಾರರ ಪಟ್ಟಿಯಲ್ಲಿಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಹೆಸರು ಸೇರ್ಪಡೆ, ವರ್ಗಾವಣೆ, ತಿದ್ದುಪಡಿ ಮತ್ತು ರದ್ಧತಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವವರು ಜನನ ಪ್ರಮಾಣಪತ್ರ, ವಿಳಾಸ ದೃಢೀಕರಣ ದಾಖಲೆ, ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಅರ್ಜಿ ಹಾಕಬಹುದು. ಜ. 6ರಂದು ಒಂದೇ ದಿನ ಮತದಾರರ ಪಟ್ಟಿಗೆ ಹೆಸರು ಸೇರಿಸಲು 2218 ಮಂದಿ ಅರ್ಜಿ ಸಲ್ಲಿಸಿದ್ದಾರೆ.
from India & World News in Kannada | VK Polls https://ift.tt/2Fu6Kl0