ಆಟೋ ಚಾಲಕರಿಗೆ ಪ್ರಯಾಣ ದರ ಏರಿಕೆಯ ಖುಷಿ ಸವಿಯುವ ಮುನ್ನವೇ ಗ್ಯಾಸ್‌ ದರ ಏರಿಕೆಯ ಬರೆ!

ವಿಜಯ್‌ ಕುಮಾರ್‌ ಆರ್‌. ಗಜ್ಜರಹಳ್ಳಿ ತುಮಕೂರು: ಇಂಧನ ದರ ಏರಿಕೆ ಬೆನ್ನಲ್ಲೇ ಆಟೋ ದರ ಏರಿಕೆ ಪ್ರಯಾಣಿಕರಿಗೆ ಶಾಕ್‌ ನೀಡಿದೆ. ದರ ಏರಿಕೆಯ ಖುಷಿಯಲ್ಲಿದ್ದ ಆಟೋ ಚಾಲಕರಿಗೆ ಇದೀಗ ಆಟೋ ಗ್ಯಾಸ್‌ ದರ ಏರಿಕೆಯು ಸಂಕಟ ತಂದೊಡ್ಡಿದೆ. ಡಿ.1ರಿಂದ ಆಟೋ ದರ ಏರಿಕೆಯಾಗಿದೆ. ಇದು ಆಟೋ ಪ್ರಯಾಣಿಕರಿಗೆ ಶಾಕ್‌ ನೀಡಿದ್ದು, ಚಾಲಕರು ದರ ಏರಿಕೆಯ ಖುಷಿಯಿಂದ ರಸ್ತೆಗಿಳಿದಿದ್ದಾರೆ. ಆದರೆ, ಈ ಹಿಂದೆ 1 ಲೀಟರ್‌ಗೆ 66 ರೂ. ಇದ್ದ ಗ್ಯಾಸ್‌ ಬೆಲೆ ಇದೀಗ 3.5ರೂ. ಹೆಚ್ಚಳವಾಗಿದ್ದು 69.5 ರೂ. ಆಗಿದ್ದು, ಆಟೋ ಚಾಲಕರು ಕಂಗಾಲಾಗುವಂತೆ ಮಾಡಿದೆ. ಈ ಹಿಂದೆ ಕನಿಷ್ಠ ಬಾಡಿಗೆ ಚಾರ್ಜ್‌ 25 ರೂ. ಇತ್ತು. ಈಗ ಹೆಚ್ಚುವರಿಯಾಗಿ 5 ರೂ. ಸೇರ್ಪಡೆಯಾಗಲಿದ್ದು, ಮಿನಿಮಮ್‌ ಚಾರ್ಜಸ್‌ 30 ರೂ.ಗೆ ಏರಿಕೆಯಾಗಿದೆ. ಮೊದಲ 2 ಕಿಮೀಗೆ 30 ರೂಪಾಯಿ ನಿಗದಿಗೊಳಿಸಿದ್ದು, ನಂತರದ ಪ್ರತಿ ಕಿಮೀಗೆ ಪ್ರಯಾಣಿಕರು 15 ರೂ. ನೀಡಬೇಕಿದೆ. ಕಾಯುವಿಕೆ ದರವೂ ಹೆಚ್ಚಳ: ಈ ಹಿಂದೆ ಮಾತುಕತೆ ಮೂಲಕ ದರ ನಿಗದಿಯಾಗುತ್ತಿತ್ತು. ಆದರೆ, ಪ್ರಸ್ತುತ ಆಟೋ ದರ ಏರಿಕೆಯಿಂದ ಕಾಯುವಿಕೆಯ ದರವೂ ಹೆಚ್ಚಳವಾಗಿದ್ದು, ಮೊದಲ ಐದು ನಿಮಿಷ ಕಾಯುವುದು ಉಚಿತ. ನಂತರದಲ್ಲಿ ಪ್ರಯಾಣಿಕರು ಪ್ರತಿ ನಿಮಿಷಕ್ಕೆ 5 ರೂ. ನೀಡಬೇಕಾಗುತ್ತದೆ. ಆಟೋ ದರ ಏರಿಕೆ ನಡುವೆ ಲಗೇಜ್‌ ಸಾಗಣೆ ದರ 20 ಕೆಜಿ ವರೆಗೆ ಉಚಿತವಾಗಿದ್ದು, 21 ಕೆಜಿಯಿಂದ 50 ಕೆಜಿವರೆಗೆ 5 ರೂ. ದರ ಏರಿಕೆಯಾಗಿದೆ. ರಾತ್ರಿ ವೇಳೆ ಸಾಮಾನ್ಯ ಮೀಟರ್‌ ದರದ ಜತೆಗೆ ಅರ್ಧದಷ್ಟು ಹೆಚ್ಚು(30+15) ಪಡೆಯಲು ಅವಕಾಶ ನೀಡಲಾಗಿದೆ. 3 ತಿಂಗಳಲ್ಲಿ 20ರೂ. ಗ್ಯಾಸ್‌ ದರ ಏರಿಕೆ: ಇಂಧನ ದರ ಏರಿಕೆ ನಡುವೆ ಕಳೆದ ಮೂರು ತಿಂಗಳಲ್ಲಿ ಸುಮಾರು 20 ರೂ. ಆಟೋ ಗ್ಯಾಸ್‌ ದರ ಏರಿಕೆಯಾಗಿದ್ದು, ಆಟೋ ಚಾಲಕರು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಒಟ್ಟಾರೆಯಾಗಿ ಕಳೆದ ಕೆಲ ದಿನಗಳಿಂದಲೂ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಲೆ ಇದೆ. ಇಂಧನ, ಆಟೋ ಗ್ಯಾಸ್‌, ಆಟೋ ಬಿಡಿ ಭಾಗಗಳು, ಇನ್ಸೂರೆನ್ಸ್‌ ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಆದ್ದರಿಂದ ಬೆಲೆ ಏರಿಕೆಯೆಂಬುದು ಕೊಡು, ಕೊಳ್ಳುವವರಿಬ್ಬರಿಗೂ ಸಮಾನ ರೀತಿಯಲ್ಲಿ ನಿಗದಿಯಾಗಬೇಕೆಂಬುದು ಸಾರ್ವಜನಿಕ ವಲಯದ ಮಾತು. ತುಮಕೂರು ನಗರದಲ್ಲಿ ಆಟೋ ದರ ಏರಿಕೆ ಅಷ್ಟೇನೂ ಬದಲಾವಣೆ ತಂದಿಲ್ಲ. ಪ್ರಸ್ತುತ ಪ್ರತಿ ಸೀಟಿಗೆ 20ರೂ. ಪಡೆಯಲಾಗುತ್ತಿದೆ. ಆದರೆ, ಕೆಲ ಪ್ರಯಾಣಿಕರೇ ಸ್ವಯಂ 30ರೂ. ನೀಡುತ್ತಿದ್ದಾರೆ. ನಮ್ಮಲ್ಲಿ ಪ್ರಯಾಣಿಕರೊಟ್ಟಿಗೆ ಮಾತುಕತೆಯಿಂದ ದರ ನಿಗದಿಯಾಗುತ್ತದೆ. ಚಾಲಕರು ಮತ್ತು ಪ್ರಯಾಣಿಕರ ನಡುವೆ ಅಷ್ಟೇನೂ ಘರ್ಷಣೆಗಳಿಲ್ಲ ಎನ್ನುತ್ತಾರೆ ತುಮಕೂರು ಆಟೋ ಚಾಲಕರ ಮುಖಂಡ ಕೆ.ಎಂ.ಶಿವಕುಮಾರ್‌. ಉಳ್ಳವರಿಗೆ ಕಷ್ಟವೇನಿಲ್ಲ. ನಗರ ಸಾರಿಗೆ ಬಸ್‌ಗಳು ಸದಾ ರಷ್‌ ಆಗಿರುವ ಕಾರಣ ವಿದ್ಯಾರ್ಥಿಗಳು ಆಟೋ ಮೊರೆ ಹೋಗುವುದುಂಟು. ಆದರೆ, ಆಟೋ ದರ ಏರಿಕೆಯಿಂದ ಕಾಲೇಜು ವಿದ್ಯಾರ್ಥಿಗಳು, ಬಡ ಜನರು ಸಂಕಷ್ಟಕ್ಕೀಡಾಗಿದ್ದು, ಕಾಲ್ನಡಿಗೆ ಮತ್ತು ಸೈಕಲ್‌ ಮೊರೆ ಹೋಗುವಂತಾಗಿದೆ ಎನ್ನುತ್ತಾರೆ ಕಾವ್ಯಾ ಎಚ್‌.ಜಿ, ಬಿ.ಎಸ್ಸಿ ವಿದ್ಯಾರ್ಥಿನಿ, ತುಮಕೂರು ವಿವಿ.


from India & World News in Kannada | VK Polls https://ift.tt/3okk0zY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...