ಟೊಮೆಟೊ ಬೆಲೆ ಗಗನಕ್ಕೆ: ಉಳಿದ ತರಕಾರಿಗಳ ಬೆಲೆಯೂ ಏರಿಕೆ; ಇಲ್ಲಿದೆ ದರಪಟ್ಟಿ!

ಪ್ರಕಾಶ್‌ ಜಿ. ಹಾಸನ ಹಾಸನ: ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದ ಫಸಲು ಹಾನಿಯಾಗಿರುವುದಷ್ಟೇ ಅಲ್ಲದೇ ಸಾಗಣೆ ವೆಚ್ಚ ಅಧಿಕವಾಗಿ ದರ ಗಗನಕ್ಕೇರಿದೆ. ಇಂಧನ ದರ, ಎಲ್‌ಪಿಜಿ ಸಿಲಿಂಡರ್‌ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ತರಕಾರಿ ತುಟ್ಟಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ತರಕಾರಿಗಳು ಕೊಳೆಯುತ್ತಿವೆ. ಫಸಲು ಮಣ್ಣು ಪಾಲಾಗುತ್ತಿರುವುದು ತರಕಾರಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವರ್ತಕರು. ಅದರಲ್ಲೂ ಬೆಲೆ ಪ್ರತಿದಿನ ಏರಿಳಿತ ಕಾಣುತ್ತಿದ್ದು, ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿ. 85ಕ್ಕೆ ಮಾರಾಟವಾದರೆ, ಈರುಳ್ಳಿ ಕೆ.ಜಿ. 60ಕ್ಕೇರಿದೆ. ಹಾಸನ ತಾಲೂಕು ಸುತ್ತಮುತ್ತ, ಹಳೇಬೀಡು, ಬೇಲೂರು, ಅರಕಲಗೂಡು ಹಾಗೂ ಬೆಂಗಳೂರು ಕಡೆಗಳಿಂದ ನಗರಕ್ಕೆ ಟೊಮೆಟೊ ಬರುತ್ತದೆ. ಆದರೆ, ಮಳೆ ಕಾರಣದಿಂದಾಗಿ ಕೆಲವೆಡೆ ಬೆಳೆ ಹಾನಿಯಾಗಿದೆ. ಸ್ಥಳೀಯವಾಗಿ ಬೆಳೆಯುತ್ತಿದ್ದ ಟೊಮೆಟೊ ಈಗ ಮಾರುಕಟ್ಟೆಗೆ ಬಾರದ ಕಾರಣ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ''ಮಳೆಯಿಂದಾಗಿ ಜಮೀನಿನಲ್ಲೇ ತರಕಾರಿಗಳು ಕೊಳೆಯುತ್ತಿವೆ. ಸ್ಥಳೀಯವಾಗಿ ಬೆಳೆಯುತ್ತಿದ್ದ ಟೊಮೆಟೊ ಸದ್ಯಕ್ಕೆ ಲಭ್ಯವಿಲ್ಲದ ಕಾರಣ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಟೊಮೆಟೊ ಬರುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೊ 60ರಿಂದ, 80ರೂ.ವರೆಗೆ ಮಾರಾಟವಾಗುತ್ತಿದೆ,'' ಎನ್ನುತ್ತಾರೆ ತರಕಾರಿ ವ್ಯಾಪಾರಿ ಶರತ್‌. ಟೊಮೆಟೊ ಜತೆಗೆ ಇತರೆ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ಹುರುಳಿ ಕಾಯಿ- 60, ಬಿಟ್‌ರೂಟ್‌-70, ಬದನೆಕಾಯಿ -90, ದಪ್ಪ ಮೆಣಸಿನಕಾಯಿ-135, ಕ್ಯಾರೆಟ್‌ - 60, ನುಗ್ಗೇಕಾಯಿ -100, ಹಸಿಮಣಸಿನಕಾಯಿ -80, ಹೀರೇಕಾಯಿ -90, ತೊಂಡೆಕಾಯಿ - 90ರಂತೆ ಮಾರಾಟ ಮಾಡಲಾಗುತ್ತಿದೆ. ಸೊಪ್ಪಿನ ಬೆಲೆಯೂ ದುಬಾರಿಯಾಗಿದೆ. ಒಂದು ಕಟ್ಟು ಮೆಂತ್ಯ ಸೊಪ್ಪಿನ ಬೆಲೆ -10, ಸಾಂಬಾರ್‌ಗೆ ಬಳಸುವ ಸೊಪ್ಪಿನ ಬೆಲೆ -10ಕ್ಕೆ ಮಾರಾಟ ಮಾಡಲಾಗುತ್ತಿದೆ. ''ಇಂಧನ ದರ ಕೊಂಚ ಇಳಿಕೆಯಾಗಿದೆಯಷ್ಟೇ. ದಿನದಿಂದ ದಿನಕ್ಕೆ ತರಕಾರಿ ದರ ಏರಿಕೆಯಾಗುತ್ತಲೇ ಇದೆ. ಹೋಟೆಲ್‌ ನಡೆಸುವುದೇ ಕಷ್ಟವಾಗಿದೆ. ವಾಣಿಜ್ಯ ಸಿಲಿಂಡರ್‌ ದರ - 2,100. ದಪ್ಪ ಮೆಣಸಿನಕಾಯಿ ಕೆ.ಜಿ. -250 ತಲುಪಿದೆ. ಗ್ರಾಹಕರಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ತಿಂಡಿ, ತಿನಿಸು ಏರಿಕೆ ಮಾಡಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತಿಂಡಿ, ತಿನಿಸು ದರ ಶೇ.10ರಷ್ಟು ಏರಿಕೆ ಮಾಡಲಾಗುವುದು,'' ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಅಭಿನಂದನ್‌ ತಿಳಿಸಿದರು.


from India & World News in Kannada | VK Polls https://ift.tt/30Vqf3Y

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...