
ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬೆಳಗಾವಿಯಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಜೊತೆ ಮಾತುಕತೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ. ಬೆಂಗಳೂರಿನ ಆರ್.ಟಿ ನಗರ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ರಮೇಶ್, ಬಾಲಚಂದ್ರ ಜಾರಕಿಹೊಳಿ ಜತೆ ಚರ್ಚೆ ಮಾಡ್ತಿದ್ದೇನೆ. ಲಖನ್ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೆ ತೊಂದರೆ ಆಗಲ್ಲ. ರಮೇಶ್, ಬಾಲಚಂದ್ರ ನಮ್ಮ ಪಕ್ಷದ ಅಭ್ಯರ್ಥಿ ಪರ ಗಟ್ಟಿಯಾಗಿ ನಿಂತಿದ್ದಾರೆ. ಅವರಿಬ್ಬರ ಜತೆ ಇವತ್ತು ಸಹ ಚರ್ಚೆ ಮಾಡ್ತೇನೆ. ಎ ಮಂಜು ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಬೆಳಗಾವಿ ಪರಿಷತ್ ಚುನಾವಣೆಯ ಬೆಳವಣಿಗೆಗಳ ಮೇಲೆ ಗಮನ ಇರಿಸಿದ್ದೇವೆ ಎಂದು ತಿಳಿಸಿದರು. ಪರಿಷತ್‌ನಲ್ಲಿ ಸ್ಪರ್ಧಿಸಿರುವ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ. ಲಖನ್ ಜಾರಕಿಹೊಳಿ ನಮ್ಮ ಪಕ್ಷದಲ್ಲಿ ಇಲ್ಲ, ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ. ಆದರೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಲಖನ್ ಸಹೋದರ ಆಗಿದ್ದಾರೆ. ಈ ಇಬ್ಬರು ನಮ್ಮ ಪಕ್ಷದವರಾಗಿರುವ ಕಾರಣ ಈ ಇಬ್ಬರ ಜೊತೆ ನಾನು ಚರ್ಚೆ ಮಾಡ್ತೀನಿ ಎಂದರು. ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಅವರಿಗೆ ಟಿಕೆಟ್ ನೀಡಿಲ್ಲ. ಇದು ರಮೇಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮಳೆ ಹಾನಿ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಮಧ್ಯಾಹ್ನ 12ಗಂಟೆಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಹೆಚ್ಚಿನ ಮಳೆ ಬಂದಾಗ ರಾಜಕಾಲುವೆಯಿಂದ ಸಮಸ್ಯೆ ಆಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು ಎಂದರು. ಇನ್ನು ಎಲ್ಲಿ ನೀರು ಹರಿಯುತ್ತಿದೆ ಅಲ್ಲಿ ತಡೆಯುವ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದ ಸಿಎಂ, ರಾಜಕಾಲುವೆಯಿಂದ ಸಮಸ್ಯೆ ಆಗದ ರೀತಿ ಕ್ರಮ ವಹಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಇವಾಗ ಕೆಆರ್ ಪುರಂನ ಕ್ಷೇತ್ರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಡ್ತಿದ್ದೇನೆ. ಅಲ್ಲಿ ಮಳೆಯಿಂದ ಆದ ಅನಾಹುತಗಳ ಬಗ್ಗೆ ಪರಿಶೀಲನೆ ಮಾಡ್ತೀನಿ ಎಂದರು.
from India & World News in Kannada | VK Polls https://ift.tt/3CP8X5H