ಸೋರುತಿಹವು ದೇಗುಲಗಳು; ಸಂರಕ್ಷಣೆಗಿಂತ ಆದಾಯ ಗಳಿಕೆಯಲ್ಲಿ ಮುಜರಾಯಿ ಇಲಾಖೆಗೆ ಆಸಕ್ತಿ!

ಎಚ್‌.ಪಿ. ಪುಣ್ಯವತಿ, ಬೆಂಗಳೂರು ಬೆಂಗಳೂರು: ನಿರಂತರ ಮಳೆಯಿಂದ ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಸಾವಿರಾರು ಕಟ್ಟಡಗಳಲ್ಲಿ ಸೋರುವಿಕೆ ಸಾಮಾನ್ಯವಾಗಿದೆ. ದೇವಾಲಯಗಳಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಮುಜರಾಯಿ ಇಲಾಖೆಯು ತನ್ನ ಸುಪರ್ದಿಯ ದೇವಾಲಯಗಳ ನಿರ್ವಹಣೆಯನ್ನು ಮರೆತ ಪರಿಣಾಮ ಹಲವು ಗುಡಿಗಳು ದುರ್ಬಲಗೊಂಡಿದ್ದು, ಕುಸಿಯುತ್ತಿವೆ. ಕೆಲವು ದೇವಾಲಯಗಳು ಗರ್ಭಗುಡಿ ಸೇರಿದಂತೆ ಇಡೀ ಒಳಾಂಗಣ ಜಲಮಯವಾಗಿದೆ. ಇದನ್ನು ಕಂಡ ಅರ್ಚಕರು ಸೋರುವ ಜಾಗದಲ್ಲಿ ಟರ್ಪಾಲ್‌ ಹಾಕಿದ್ದಾರೆ. ಬಕೆಟ್‌/ಟಬ್‌ಗಳನ್ನು ಇಟ್ಟಿದ್ದಾರೆ. ರಾಮನಾಥಪುರದ ಪ್ರತಿಷ್ಠಿತ ದೇಗುಲವೊಂದರ ಕಟ್ಟಡ ಇತ್ತೀಚೆಗೆ ನೆಲಕ್ಕುರುಳಿದ್ದು, ಅಲ್ಲಿನ ಸ್ಥಳೀಯರು ಧಾರ್ಮಿಕ ದತ್ತಿ ಇಲಾಖೆಗೇ ಬಂದು ಮನವಿ ನೀಡಿದರು. ಆದರೆ ಅಧಿಕಾರಿಗಳಾಗಲಿ, ಸಚಿವರಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಇದೇ ರೀತಿ, ಸಾಕಷ್ಟು ದೇವಾಲಯಗಳು ಆಪತ್ತಿನಲ್ಲಿದ್ದರೂ ಸಚಿವರು ಸದಾ ತಮ್ಮ ತವರು ಜಿಲ್ಲೆಯಲ್ಲಿ ಪ್ರವಾಸದಲ್ಲೇ ತೊಡಗಿದ್ದಾರೆ. ಆದಾಯ ಬೇಕು, ನಿರ್ವಹಣೆ ಬೇಡವೇಹಲವು ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಕೋಟ್ಯಾನುಕೋಟಿ ರೂಪಾಯಿ ಆದಾಯ ತರುತ್ತಿವೆ. ಆದರೆ, ಅವುಗಳ ನಿರ್ವಹಣೆ ಮಾತ್ರ ಕಡೆಗಣಿಸಲಾಗಿದೆ ಎಂದು ಭಕ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳಿ ಕೇಳಿ ದೇವಾಲಯಗಳನ್ನು ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದಂಥವು. ಇಂತಹ ಪುರಾತನ ಕಟ್ಟಡಗಳ ಸ್ಥಿತಿಗತಿಗಳನ್ನು ಕಾಲ ಕಾಲಕ್ಕೆ ಪರಿಶೀಲಿಸದ ಪರಿಣಾಮ ಇಂದು ಹತ್ತಾರು ದೇವಾಲಯಗಳು ಅದರಲ್ಲೂ'ಎ' ಗ್ರೇಡ್‌ ಮತ್ತು 'ಬಿ' ಗ್ರೇಡ್‌ ದೇವಾಲಯಗಳೇ ಸೋರಲಾರಂಭಿಸಿವೆ. ಹಲವೆಡೆ ಗೋಡೆಗಳು ಪಾಚಿಕಟ್ಟಿ ದುರ್ಬಲಗೊಂಡಿವೆ. ರಾಜಧಾನಿಯಲ್ಲೂ ಆಪತ್ತುಕೆ.ಜಿ. ರಸ್ತೆಯ ಸರ್ಕಲ್‌ ಬಂಡಿ ಶೇಷಮ್ಮ ದೇವಾಲಯ, ಬಳೇಪೇಟೆಯ ಸುಗ್ರೀವ ದೇವಾಲಯ, ಮಲ್ಲೇಶ್ವರದ ಮಹಾಗಣಪತಿ ದೇವಾಲಯ, ಕೆಂಪೇಗೌಡನಗರದ ಅಮ್ಮಾ ಭವಾನಿ ದೇವಾಲಯಗಳು ಸೋರುತ್ತಿವೆ. ಇಲಾಖೆ ಮಾತ್ರ ಬೆಚ್ಚಗಿದೆ. ಈ ನಾಡಿನ ಪರಂಪರೆ, ವೈಭವದ ಪ್ರತೀಕವಾದ ದೇವಾಲಯಗಳ ರಕ್ಷಣೆಗೆ ಯಾಕೆ ಮುಂದೆ ಬರುತ್ತಿಲ್ಲ ಎಂದು ಭಕ್ತರಾದ ಸತ್ಯನಾರಾಯಣ ಮತ್ತು ಸಾಮಾಜಿಕ ಕಾರ್ಯಕರ್ತ ಬಿ.ವಿ. ರವಿಕುಮಾರ್‌ ಪ್ರಶ್ನಿಸಿದ್ದಾರೆ. ಹಣ ಪಡೆದರೂ ರಿಪೇರಿಯಿಲ್ಲಮಲ್ಲೇಶ್ವರದ ಮಹಾಗಣಪತಿ ದೇವಾಲಯ (ಎ ಗ್ರೇಡ್‌ ದೇವಾಲಯ)ಕ್ಕೆ ಎಂಟು ವರ್ಷಗಳ ಹಿಂದೆಯೇ ಅಂದಾಜು 70 ಲಕ್ಷ ರೂ.ಗಳನ್ನು ರಿಪೇರಿಗಾಗಿ ಧಾರ್ಮಿಕ ದತ್ತಿ ಇಲಾಖೆಯು ನಿರ್ಮಿತಿ ಕೇಂದ್ರ (ಇದೀಗ ಈ ಕೇಂದ್ರವನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ)ಕ್ಕೆ ಹಣ ಕೊಟ್ಟು ಅಧಿಕಾರಿಗಳು ಕಮಿಷನ್‌ ಪಡೆದರು. ಬಳಿಕ ಆ ಹಣ ಏನಾಯಿತೆಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ರಿಪೇರಿ ಮಾತ್ರ ಆಗಲಿಲ್ಲ. ಬಳೇಪೇಟೆಯ ವೆಂಕಟೇಶ್ವರ ಸ್ವಾಮಿ, ರಂಗನಾಥಸ್ವಾಮಿ ದೇವಾಲಯಗಳಿಗೂ ಹಣ ನೀಡಲಾಗಿದೆ. ಆದರೆ ರಿಪೇರಿಯಾಗಿಲ್ಲ ಎಂದು ವಿ. ರವಿಕುಮಾರ್‌ ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3r8wUTq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...