ಬೆಂಗಳೂರಿನಲ್ಲಿ ಗಡುವು ಮುಗಿದರೂ ಪೂರ್ಣಗೊಂಡಿಲ್ಲ 375ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಯೋಜನೆಗಳು..!

: ಕೋವಿಡ್‌ ಹಿನ್ನೆಲೆಯಲ್ಲಿ ಮೂರು ಬಾರಿ ಆರು ತಿಂಗಳಿನಂತೆ 18 ತಿಂಗಳು ವಸತಿ ಯೋಜನೆಗಳ ವಿಸ್ತರಣೆ ಮಾಡಿದ್ದರೂ ಇನ್ನೂ 375ಕ್ಕೂ ಅಧಿಕ ವಸತಿ ಯೋಜನೆಗಳು ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ಸಾವಿರಾರು ಗೃಹ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ಬಿಲ್ಡರ್‌ಗಳ ವಿರುದ್ಧ ಬರುತ್ತಿರುವ ದೂರುಗಳನ್ನು ಆಧರಿಸಿ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ದಂಡ ವಿಧಿಸುವುದೂ ಸೇರಿದಂತೆ ಕಾನೂನು ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದೆ. ಬಿಲ್ಡರ್‌ಗಳು ಕೋವಿಡ್‌ ಸಾಂಕ್ರಾಮಿಕದ ಕಾರಣ ನೀಡಿ ವಸತಿ ಯೋಜನೆಗಳ ಗಡುವನ್ನು ಇನ್ನೂ 6 ತಿಂಗಳು ವಿಸ್ತರಣೆ ಮಾಡಬೇಕೆಂದು ಬೇಡಿಕೆ ಮಂಡಿಸುತ್ತಿವೆ. ಆದರೆ, ಗೃಹ ಖರೀದಿದಾರರು ಲಾಕ್‌ಡೌನ್‌ ಸಂದರ್ಭ ಹೊರತುಪಡಿಸಿ ಉಳಿದ ಸಮಯದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿರಲಿಲ್ಲ. ಹಾಗಾಗಿ, ಬಿಲ್ಡರ್‌ಗಳ ಕಾರಣ ಒಪ್ಪಬೇಕಾಗಿಲ್ಲ. ಯಾವುದೇ ಕಾರಣಕ್ಕೂ ಮತ್ತೆ ವಸತಿ ಯೋಜನೆಗಳಿಗೆ ಗಡುವು ವಿಸ್ತರಣೆ ಮಾಡಬಾರದು. ಯಾರು ಗಡುವಿನಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿಲ್ಲವೋ ಅಂತಹ ಬಿಲ್ಡರ್‌ಗಳಿಗೆ ದಂಡದ ರುಚಿ ಜತೆಗೆ ಕಾನೂನು ಕ್ರಮದ ಬಿಸಿ ಮುಟ್ಟಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಸಾಂಕ್ರಾಮಿಕದಿಂದ ಬಾಧಿತವಾದ ರಿಯಲ್‌ ಎಸ್ಟೇಟ್‌ ವಲಯ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲಿ ಎಂಬ ಉದ್ದೇಶದಿಂದ 'ಕರ್ನಾಟಕ ರೇರಾ' ಸೆ.30ರವರೆಗೆ ವಸತಿ ಯೋಜನೆಗಳ ಗಡುವನ್ನು ವಿಸ್ತರಣೆ ಮಾಡಿತ್ತು. ಆದರೂ ಇನ್ನೂ ಎಷ್ಟು ವಸತಿ ಯೋಜನೆಗಳು ಗಡುವಿನಲ್ಲಿ ಪೂರ್ಣಗೊಂಡಿಲ್ಲ ಎಂಬ ಬಗ್ಗೆ ಪ್ರಾಧಿಕಾರ ನಿಖರ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ಗೃಹ ಖರೀದಿದಾರರಿಗೆ ಬರೆ: 'ಆದರೆ ವಸತಿ ಯೋಜನೆಗಳು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳದ ಕಾರಣ ಗೃಹ ಖರೀದಿದಾರರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಕೋವಿಡ್‌ನಿಂದಾಗಿ ಆರ್ಥಿಕ ಹಿಂಜರಿಕೆ ಉಂಟಾಗಿ ವೇತನ ಕಡಿತ, ಕೆಲಸದಿಂದ ವಜಾ ಮತ್ತಿತರ ಕ್ರಮಗಳಿಂದಾಗಿ ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಬಹುತೇಕ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರು ವಸತಿ ಯೋಜನೆಗಳಲ್ಲಿ ಹಣ ತೊಡಗಿಸಲು ಸಾಲ ಮಾಡಿರುತ್ತಾರೆ. ಅಂಥವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಇನ್ನೂ ಹೆಚ್ಚಿನ ತೊಂದರೆಗೆ ಒಳಗಾಗಿ ಅಕ್ಷರಶಃ ಬರೆ ಹಾಕಿಸಿಕೊಳ್ಳುತ್ತಿದ್ದಾರೆ' ಎನ್ನುತ್ತಾರೆ ಗೃಹ ಖರೀದಿದಾರರೊಬ್ಬರು. 'ವಸತಿ ಯೋಜನೆಗಳ ಗಡುವು ಮುಗಿದಿರುವ ಬಿಲ್ಡರ್‌ಗಳ ವಿರುದ್ಧ 'ರೇರಾ' ಯಾವುದೇ ಕಾರಣಕ್ಕೂ ಮೃದು ಧೋರಣೆ ತಾಳಬಾರದು, ಬಿಲ್ಡರ್‌ಗಳಿಗೆ ದಂಡ ವಿಧಿಸುವುದೂ ಸೇರಿದಂತೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕು. ನಿಯಮದಂತೆ ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸದವರಿಗೆ ಫ್ಲ್ಯಾಟ್‌ನ ಮೌಲ್ಯದ ಹಣಕ್ಕೆ ಶೇ.9ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ' ಎನ್ನುತ್ತಾರೆ 'ರೇರಾ' ಜಾರಿಗೆ ಶ್ರಮಿಸುತ್ತಿರುವ ಸಂಘಟನೆಗಳ ಪದಾಧಿಕಾರಿಗಳು. ಮುಲಾಜಿಲ್ಲದೆ ಕ್ರಮ: ಈ ನಡುವೆ, 'ವಸತಿ ಯೋಜನೆಗಳನ್ನು ಗಡುವಿನಲ್ಲಿ ಪೂರ್ಣಗೊಳಿಸದ ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದೂರುಗಳನ್ನು ಆಧರಿಸಿ ದಂಡ ವಿಧಿಸುವುದೂ ಸೇರಿದಂತೆ ನಿಯಮದಡಿ ಲಭ್ಯವಿರುವ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸುವ ಬಿಲ್ಡರ್‌ಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು' ಎಂದು ಕರ್ನಾಟಕ ರಿಯಲ್‌ ಎಸ್ಟೇಟ್‌ ಪ್ರಾಧಿಕಾರದ ಅಧ್ಯಕ್ಷ ಎಚ್‌. ಸಿ. ಕಿಶೋರ ಚಂದ್ರ ಹೇಳಿದರು. 'ನಿಗದಿತ ಗಡುವಿನಲ್ಲಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸದಿರುವ ಬಗ್ಗೆ ದೂರುಗಳನ್ನು ಆಧರಿಸಿ ದಂಡ ವಿಧಿಸುವುದೂ ಸೇರಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆದಿದೆ' ಎಂದು ಕರ್ನಾಟಕ ರೇರಾ ಅಧ್ಯಕ್ಷ ಎಚ್‌. ಸಿ. ಕಿಶೋರ ಚಂದ್ರ ಹೇಳಿದ್ದಾರೆ.


from India & World News in Kannada | VK Polls https://ift.tt/3bw6C4l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...