ಹೊಸದಿಲ್ಲಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 32ನೇ ಪಂದ್ಯದಲ್ಲಿ ಕ್ರಿಸ್ ಗೇಲ್ ಆಡಿದ್ದರೆ ಪಂಜಾಬ್ ಕಿಂಗ್ಸ್ ಈ ರೀತಿ ಸೋಲುತ್ತಿರಲಿಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 185 ರನ್ ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ಮೊದಲನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟದ ಹೊರತಾಗಿಯೂ ಕೊನೆಯ ಓವರ್‌ನಲ್ಲಿ ಕೇವಲ ಎರಡೇ ಎರಡು ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ ಗೆಲುವು ಪಡೆಯಲು 8 ರನ್ ಅಗತ್ಯವಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಮುಸ್ತಾಫಿಝುರ್ ರೆಹಮಾನ್ ಹಾಗೂ ಕಾರ್ತಿಕ್ ತ್ಯಾಗಿ ಗುಣಮಟ್ಟದ ಬೌಲಿಂಗ್‌ನಲ್ಲಿ ಪಂಜಾಬ್ ಬ್ಯಾಟ್ಸ್‌ಮನ್‌ಗಳು ಸ್ಟ್ರೈಕ್ ರೊಟೇಟ್ ಮಾಡುವಲ್ಲಿ ವಿಫಲರಾದ ಪರಿಣಾಮ ಸೋಲಿನ ಮರ್ಮಾಘಾತ ಅನುಭವಿಸಬೇಕಾಯಿತು. ಪಂದ್ಯದ ಬಳಿಕ ಕ್ರಿಕ್‌ಬಝ್ ಜೊತೆ ಮಾತನಾಡಿದ ವಿರೇಂದ್ರ ಸೆಹ್ವಾಗ್, 30 ಎಸೆತಗಳು ಎದುರಿಸಿದ ಬಳಿಕ ಮಯಾಂಕ್ ಅಗರ್ವಾಲ್ ಅಥವಾ ಕೆ.ಎಲ್ ರಾಹುಲ್ ಅವರಲ್ಲಿ ಒಬ್ಬರು ಯಾರಾದರೂ ಪಂದ್ಯವನ್ನು ಮುಗಿಸಬೇಕಿತ್ತು. ಏಡೆನ್ ಮಾರ್ಕ್ರಮ್‌ಗೆ ಅವಕಾಶ ಮಾಡಿಕೊಟ್ಟ ಒಂದು ವೇಳೆ ಅರ್ಧಶತಕ ಸಿಡಿಸಿ ಕ್ರೀಸ್‌ನಲ್ಲಿ ಇದ್ದಿದ್ದರೆ ಕೊನೆಯ ಓವರ್‌ನಲ್ಲಿ ಈ ರೀತಿ ಸೋಲಲು ಬಿಡುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟದ್ದಾರೆ. "ಸೋಲಿನ ಬಗ್ಗೆ ಆಟಗಾರನನ್ನು ಪ್ರತ್ಯೇಕಿಸುವುದು ಈ ಪಂದ್ಯಕ್ಕೆ ಸ್ವಲ್ಪ ಕಷ್ಟಕರವಾಗಿರುತ್ತದೆ. ಆದರೆ, ಅದೃಷ್ಟ ಪರ ಇರಲಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಆದರೆ, ಇಲ್ಲಿ ನಾನು ಮಯಾಂಕ್ ಅಗರ್ವಾಲ್ ಅವರನ್ನು ಆರಿಸಿಕೊಳ್ಳುತ್ತೇನೆ, ಏಕೆಂದರೆ ಪಂದ್ಯದಲ್ಲಿ ಫಾರ್ಮ್‌ನಲ್ಲಿರುವ ಒಬ್ಬ ಆಟಗಾರ ಇನಿಂಗ್ಸ್ ಪೂರ್ತಿ ಆಡಿ ಪಂದ್ಯವನ್ನು ಮುಗಿಸಬೇಕು ಹಾಗೂ ಇತರರಿಗೆ ಅವಕಾಶ ನೀಡಬಾರದು," ಎಂದು ಹೇಳಿದರು. "ಇದಕ್ಕೆ ಉತ್ತಮ ಉದಾಹರಣೆಯನ್ನು ನಾನು ಋತುರಾಜ್ ಗಾಯಕ್ವಾಡ್ ಅವರನ್ನು ತೆಗೆದುಕೊಳ್ಳುತ್ತೇನೆ. ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 20 ಓವರ್‌ಗಳವರೆಗೂ ಬ್ಯಾಟ್ ಮಾಡಿ ಅಜೇಯ 89 ರನ್ ಗಳಿಸಿದರು ಹಾಗೂ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು ಹಾಗೂ ನಿರೀಕ್ಷೆಯಂತೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಪಡೆದಿತ್ತು," ಎಂದು ಸೆಹ್ವಾಗ್ ತಿಳಿಸಿದ್ದಾರೆ. "ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್ ರಾಹುಲ್ ಕೂಡ ಇದೇ ರೀತಿಯ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಏಕೆಂದರೆ, ನೀವು 40 ರಿಂದ 50 ಎಸೆತಗಳವರೆಗೂ ಕ್ರೀಸ್‌ನಲ್ಲಿದ್ದರೆ, ನಿಮಗೆ ಪಿಚ್ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ, ಹೊಸ ಬ್ಯಾಟ್ಸ್‌ಮನ್ ಬಂದಾಗ, ಅವರಿಗೆ ಪಿಚ್ ಬಗ್ಗೆ ಜಾಸ್ತಿ ತಿಳಿದಿರುವುದಿಲ್ಲ. ಒಂದು ವೇಳೆ ಕ್ರಿಸ್ ಗೇಲ್ ಪಂದ್ಯವಾಡಿ 50 ರಿಂದ 60 ರನ್ ಗಳಿಸಿದ್ದರೆ, ಪಂಜಾಬ್ ಈ ರೀತಿ ಸೋಲಲು ಅವರು ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂಬುದಂತೂ ಗ್ಯಾರೆಂಟಿ ಹಾಗೂ ಅವರು ಪಕ್ಕಾ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದರು," ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3CwPOWv